ಪ್ರಧಾನಿ ಮೋದಿಯಿಂದ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪನೆ-ಪುರಿ ಶಂಕರಾಚಾರ್ಯ ಅಸಮಾಧಾನ-ಪ್ರತಿಷ್ಠಾಪನೆ ಮಾಡುವಾಗ ಚಪ್ಪಾಳೆ ತಟ್ಟಲು ನಾನು ಹೋಗಬೇಕೆ? ಎಂದು ಪ್ರಶ್ನಿಸಿದ ಸ್ವಾಮೀಜಿ

ಮಂಗಳೂರು(ಭೋಪಾಲ್): ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಪ್ರತಿಮೆಯನ್ನು ಮುಟ್ಟಿ ಅದನ್ನು ಪ್ರತಿಷ್ಠಾಪನೆ ಮಾಡುವುದಾದರೆ ಅದನ್ನು ನೋಡಿ ಚಪ್ಪಾಳೆ ತಟ್ಟಲು ನಾನು ಅಲ್ಲಿಗೆ ಹೋಗಬೇಕೆ? ಎಂದು ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಮುಖ ಮಠಗಳಲ್ಲಿ ಒಂದಾದ ಪುರಿಯ ಶಂಕರಾಚಾರ್ಯರಾದ ಇವರು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಬುಧವಾರ ಮಧ್ಯ ಪ್ರದೇಶದ ರತ್ಲಾಮ್ ನಲ್ಲಿ ನಡೆದ ಸನಾತನ ಧರ್ಮ ಸಭಾದ ಕಾರ್ಯಕ್ರಮದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಒಂದನ್ನು ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ನಡೆಸುತ್ತಿದ್ದಾರೆ.

” ನಮ್ಮ ಮಠಕ್ಕೆ ಜನವರಿ 22 ರ ಕಾರ್ಯಕ್ರಮಕ್ಕೆ ಆಹ್ವಾನ ಬಂದಿದೆ. ಅದರಲ್ಲಿ ನಾನು ಅಲ್ಲಿಗೆ ಹೋಗಲು ಬಯಸುವುದಾದರೆ ಗರಿಷ್ಟ ಒಬ್ಬರೊಂದಿಗೆ ಹೋಗಬಹುದು ಎಂದು ಹೇಳಲಾಗಿದೆ. ನನ್ನ ಜೊತೆ ನೂರು ಮಂದಿಯನ್ನು ಕರೆದುಕೊಂಡು ಹೋಗಲು ಅವಕಾಶ ನೀಡಿದರೂ ನಾನು ಅಲ್ಲಿಗೆ ಆ ದಿನ ಹೋಗುವುದಿಲ್ಲ ” ಎಂದು ಸ್ವಾಮಿ ನಿಶ್ಚಲಾನಂದ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ಸ್ವಾಮೀಜಿ ಇತ್ತೀಚಿಗೆ ನ್ಯೂಸ್ 18 ನ ನಿರೂಪಕ ಆನಂದ್ ನರಸಿಂಹನ್ ಅವರಿಗೆ ನೀಡಿದ ಸಂದರ್ಶನದಲ್ಲಿ ” ಯಜ್ಞ ಮಾಡುವುದು, ಮಾಡಿಸುವುದು – ಇವೆರಡೂ ಬ್ರಾಹ್ಮಣರ ಕೆಲಸ. ಆ ಅಧಿಕಾರ ಬ್ರಾಹ್ಮಣರಿಗೆ ಮಾತ್ರವಿದೆ. ಭಗವಾನ್ ನ ಮನೆಯಲ್ಲಿ ಆಚಾರ್ಯನ ಸ್ಥಾನ ಬ್ರಾಹ್ಮಣನಿಗೆ ಮಾತ್ರ ಇದೆ ” ಎಂದು ಹೇಳಿದ್ದು ಸುದ್ದಿಯಾಗಿತ್ತು.

” ನಾನು ಅಯೋಧ್ಯೆಗೆ ಈ ಹಿಂದೆಯೂ ಹೋಗಿದ್ದೇನೆ. ಮುಂದೆಯೂ ರಾಮನ ದರ್ಶನಕ್ಕಾಗಿ ಹೋಗುತ್ತೇನೆ. ಆದರೆ ಅಲ್ಲಿ ರಾಮ ಲಲ್ಲಾನ ಪ್ರತಿಮೆಯ ಪ್ರತಿಷ್ಠಾಪನೆ ಶಾಸ್ತ್ರೀಯ ವಿಧಿಗಳ ಪ್ರಕಾರವೇ ಆಗಬೇಕು. ನಮ್ಮ ಗೋವರ್ಧನ ಪೀಠದ ವ್ಯಾಪ್ತಿ ಪ್ರಯಾಗ್ ವರೆಗೂ ಇದೆ. ಆದರೆ ಜನವರಿ 22ರ ಕಾರ್ಯಕ್ರಮಕ್ಕೆ ನಮ್ಮ ಸಲಹೆ ಅಥವಾ ಮಾರ್ಗದರ್ಶನವನ್ನು ಕೇಳಿಲ್ಲ ” ಎಂದು ಸ್ವಾಮಿ ಹೇಳಿದ್ದಾರೆ.

“ನನಗೆ ಬೇಸರವಿಲ್ಲ. ನನಗೂ ಇತರ ಸನಾತನಿ ಹಿಂದೂಗಳ ಹಾಗೆ ಸಂತಸವಾಗಿದೆ. ವಿಶೇಷವಾಗಿ ಈಗಿನ ಪ್ರಧಾನಿ ಮೋದಿ ತನ್ನನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಹೇಡಿಯಲ್ಲ, ಅವರು ಧೈರ್ಯ ಹಾಗು ಹೆಮ್ಮೆಯಿಂದ ಹಿಂದುತ್ವ ಹಾಗು ಮೂರ್ತಿ ಪೂಜೆ ಬಗ್ಗೆ ಪ್ರತಿಪಾದಿಸುತ್ತಾರೆ. ಆದರೆ ನಾನು ಶಂಕರಾಚಾರ್ಯನಾಗಿ ಅಲ್ಲಿಗೆ ಹೋಗಿ ಏನು ಮಾಡಲಿ ? ಪ್ರಧಾನಿ ಮೋದಿ ರಾಮನ ಪ್ರತಿಮೆಯನ್ನು ಮುಟ್ಟಿ ಅದನ್ನು ಪ್ರತಿಷ್ಟಾಪನೆ ಮಾಡಿದರೆ ನಾನು ಅಲ್ಲಿ ನಿಂತು ಚಪ್ಪಾಳೆ ತಟ್ಟಿ ಅವರಿಗೆ ಜೈ ಜೈ ಹೇಳಬೇಕೇ? ” ಎಂದವರು ಕೇಳಿದ್ದಾರೆ.

ಮೋದಿಯವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ನನ್ನನ್ನು ಭೇಟಿಯಾಗಿದ್ದರು. ಸಿಎಂ ಆದಿತ್ಯನಾಥ್ ಅವರೂ ಎರಡು ಮೂರು ಬಾರಿ ಕೋವಿಡ್ ಗೆ ಮೊದಲು ಬಂದಿದ್ದರು. ವಿ ಎಚ್ ಪಿ ಮಾಜಿ ಅಧ್ಯಕ್ಷ ದಿವಂಗತ ಅಶೋಕ್ ಸಿಂಘಾಲ್ ಅವರು ಕನಿಷ್ಟ 70 ಬಾರಿ ನನ್ನನ್ನು ಭೇಟಿಯಾಗಿದ್ದರು ” ಎಂದು ಸ್ವಾಮೀಜಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here