ಬೆಂಗಳೂರಿನ ರಾಮಭಕ್ತ ಕೈಗಾರಿಕೋದ್ಯಮಿ ಕೊಡುಗೆ- ರಾಮ ಮಂದಿರಕ್ಕೆ ಬೃಹದಾಕಾರದ ‘ಅಳಿಲು’ ಸೇವೆ-ಅಯೋಧ್ಯೆಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಅನಾವರಣಗೊಳ್ಳಲಿರುವ ಅಳಿಲ ಪುತ್ಥಳಿ 

ಮಂಗಳೂರು(ಬೆಂಗಳೂರು): ಬೆಂಗಳೂರಿನ ನಾಗಸಂದ್ರ ಮೆಟ್ರೋ ಬಳಿಯ ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕರಾದ ಸಿ ಪ್ರಕಾಶ್ ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ, 15 ಅಡಿ ಎತ್ತರ ಹಾಗೂ 7.5 ಅಡಿ ಅಗಲದ ಅಳಿಲಿನ ಪುತ್ಥಳಿ ಅಯೋಧ್ಯೆಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಅನಾವರಣಗೊಳ್ಳಲಿದೆ.

ರಾಮಾಯಣದಲ್ಲಿ ರಾಮಸೇತು ನಿರ್ಮಾಣದ ವೇಳೆ ಪುಟ್ಟ ಅಳಿಲು ಸಲ್ಲಿಸಿದ ಸೇವೆ ಪ್ರಶಂಸನಾರ್ಹ ಮತ್ತು ಗಮನ ಸೆಳೆಯುವಂತಹದ್ದು. ಇದೇ ಒಂದು ವಿಷಯವನ್ನಿಟ್ಟುಕೊಂಡು ಬೆಂಗಳೂರಿನ ನಾಗಸಂದ್ರದ ಕೈಗಾರಿಕೋದ್ಯಮಿಯೊಬ್ಬರು ನಿರ್ಮಿಸಿರುವ ಬೃಹದಾಕಾರದ ಅಳಿಲು ಪುತ್ಥಳಿ ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಶಾಶ್ವತವಾಗಿ ವಿರಾಜಮಾನವಾಗಲಿದೆ. ಬೆಂಗಳೂರಿನ ನಾಗಸಂದ್ರದ ಪ್ರಸಿದ್ಧಿ ಇಂಜಿನಿಯರ್ಸ್ ಕಂಪೆನಿಯ ಮಾಲೀಕ ಸಿ ಪ್ರಕಾಶ್ ಎರಡೂವರೆ ಟನ್ ಕಾರ್ಟನ್ ಸ್ಟೀಲ್ ಬಳಸಿ ನಿರ್ಮಿಸಿದ 15 ಅಡಿ ಎತ್ತರ ಹಾಗೂ 7.5 ಅಡಿ ಅಗಲದ ಅಳಿಲಿನ ಪುತ್ಥಳಿ ಹೊತ್ತ ಟ್ರಕ್ ರಸ್ತೆ ಮಾರ್ಗವಾಗಿ ಅಯೋಧ್ಯೆಯತ್ತ ತೆರಳಿದೆ. ಜ.11ರಂದು ಅಯೋಧ್ಯೆಗೆ ತಲುಪಲಿದ್ದು, 12ರಂದು ಅಯೋಧ್ಯೆ ರೈಲ್ವೆ ನಿಲ್ದಾಣ ಆವರಣದಲ್ಲಿ ಅಳಿಲು ಪ್ರತಿಷ್ಠಾಪನೆಗೊಳ್ಳಲಿದೆ. ಪ್ರತಿಷ್ಟಾಪನೆಗೆ ಸಂಬಂಧಿಸಿದಂತೆ ಈಗಾಗಲೇ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆಯಲ್ಲದೆ. ಸ್ಥಳವನ್ನೂ ನಿಗದಿಪಡಿಸಿದೆ.

ಈ ಪುತ್ಥಳಿ ನಿರ್ಮಾಣಕ್ಕೆ ಕಾರ್ಟನ್ ಸ್ಟೀಲ್ ಬಳಸಿದ್ದು ಇದರಲ್ಲಿ ತಾಮ್ರದ ಮಿಶ್ರಣ ಇರುವುದರಿಂದ 100 ವರ್ಷಗಳಾದರೂ ಸಹ ಪುತ್ಥಳಿ ಯಾವುದೇ ರೀತಿ ಹಾಳಾಗಲು ಸಾಧ್ಯವಿಲ್ಲ. ಜೊತೆಗೆ ನಿರ್ವಹಣೆಗೆ ಯಾವುದೇ ವೆಚ್ಚ ತಗುಲುವುದಿಲ್ಲ ಎನ್ನಲಾಗಿದೆ. ಮೊದಲಿಗೆ ಪೇಪರ್ ನಲ್ಲಿ ಪುತ್ಥಳಿಯ ಮಾಡೆಲ್ ರೆಡಿ ಮಾಡಿಕೊಂಡು ನಂತರ ಈ ರೀತಿಯ ಪುತ್ಥಳಿ ರೆಡಿ ಮಾಡಲಾಗಿದೆ. ಒಟ್ಟಿನಲ್ಲಿ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮಭಕ್ತ ಹನುಮನ ಜನ್ಮ ಭೂಮಿಯಾದ ಕರ್ನಾಟಕದ ವತಿಯಿಂದ ಈ ಅಳಿಲು ಸೇವೆ ಸಲ್ಲಿಕೆಯಾಗಿರುವುದು ಧನ್ಯತಾಭಾವದಿಂದ ಕೂಡಿದೆ.

LEAVE A REPLY

Please enter your comment!
Please enter your name here