ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ರೌಡಿಶೀಟರ್ ರೋಹಿದಾಸ್ ಕೆ. ಯಾನೆ ಆಕಾಶಭವನ ಶರಣ್ನನ್ನು ಜ.9ರ ಸಂಜೆ ಕಾಲಿಗೆ ಗುಂಡು ಹೊಡೆದು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಜಪ್ಪು ಕುಡ್ಪಾಡಿಯಲ್ಲಿ ಆಕಾಶಭವನ ಶರಣ್ನ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಫೈರಿಂಗ್ಗೆ ಮೊದಲು ಆರೋಪಿಯು ಚೂರಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭ ಹೆಡ್ಕಾನ್ಸ್ಟೆಬಲ್ ಪ್ರಕಾಶ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಕೊಲೆ, ಕೊಲೆಯತ್ನ, ಅತ್ಯಾಚಾರ, ಸುಲಿಗೆ ಸಹಿತ 25 ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಶರಣ್ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದ ದೋಷಿಯಾಗಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು. ಜ.2ರಂದು ನಗರದ ಮೇರಿಹಿಲ್ ಬಳಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಆರೋಪಿಯು ಪೊಲೀಸರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಮಂಗಳವಾರ ಸಂಜೆ ಜಪ್ಪು ಕುಡ್ಪಾಡಿಯಲ್ಲಿ ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಭೂಗತ ಪಾತಕಿಯೋರ್ವನ ಸಹಚರನಾಗಿದ್ದ ಶರಣ್ ಆತನ ಪರವಾಗಿ ಸುಲಿಗೆ ಮಾಡು ತ್ತಿದ್ದನೆಂಬ ಮಾಹಿತಿ ಇದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಆಕಾಶಭವನ ಶರಣ್ಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಕೋಡಿಕಲ್ನ ಶೀಲಾ ಮತ್ತು ಉಡುಪಿ ಸಂತಕಟ್ಟೆಯ ಶರತ್ ಭಂಡಾರಿ ಮತ್ತಾತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಯಾನೆ ಧನು ಹಾಗೂ ಚೇತನ್ ಯಾನೆ ಬುಳ್ಳ ಎಂಬವರ ವಿರುದ್ಧ ಕಾವೂರು ಠಾಣೆಯಲ್ಲಿ ಮತ್ತು ಶಿಬಿ ಕರ್ಬಿಸ್ಥಾನ ಎಂಬಾತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಒಟ್ಟಾರೆ ಆಶ್ರಯ ನೀಡಿದ ಆರೋಪದಲ್ಲಿ 7 ಮಂದಿಯ ವಿರುದ್ಧ 5 ಪ್ರಕರಣ ದಾಖಲಾಗಿದೆ. ಆಕಾಶಭವನ ಶರಣ್ ವಿರುದ್ಧ ಮಂಗಳೂರು ಮತ್ತು ಉಡುಪಿಯಲ್ಲಿ ಕೊಲೆ, ಕೊಲೆಯತ್ನ, ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ, ಹಫ್ತಾ ವಸೂಲಿ ಸೇರಿದಂತೆ 25 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 2 ಅತ್ಯಾಚಾರ, 1 ದರೋಡೆ ಮತ್ತು ಎನ್ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಪ್ರಕರಣಗಳು ಸೇರಿವೆ.