3 ಕೋಟಿ ಬೆಲೆಬಾಳುವ ಕಟ್ಟಡ 1.41 ಕೋಟಿಗೆ ಹರಾಜು-ವಿಧಾನಸೌಧದ ಎದುರು ದಂಪತಿ ಆತ್ಮಹತ್ಯೆಗೆ ಯತ್ನ

ಮಂಗಳೂರು(ಬೆಂಗಳೂರು): ವಿಧಾನಸೌಧದ ಎದುರು ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸೀಮೆಎಣ್ಣೆ ಸುರಿದುಕೊಳ್ಳುತ್ತಿದ್ದ ದಂಪತಿ ಶಾಯಿಸ್ತಾ ಬಾನು ಹಾಗೂ ಮಹಮ್ಮದ್ ಮುನಾಯಿದ್ ಅವರನ್ನು ಸ್ಥಳದಲ್ಲಿದ್ದ ಸ್ಥಳೀಯರು ಹಾಗೂ ಪೊಲೀಸರು ತಡೆದು ರಕ್ಷಿಸಿದರು. ದಂಪತಿ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆ.ಜೆ.ನಗರದ ಶಾಯಿಸ್ತಾ ಹಾಗೂ ಮಹಮ್ಮದ್‌ ಮನಾಯಿದ್‌ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಸಾಲ ಪಾವತಿಸದ ಕಾರಣಕ್ಕೆ ಬ್ಯಾಂಕ್​ನವರು ಜಮೀನು ಹರಾಜು ಹಾಕಿದ್ದರು. ಇದರಿಂದ ನೊಂದ ದಂಪತಿ ವಿಧಾನಸೌಧದ ಮುಂದೆ ‘ನಮಗೆ ನ್ಯಾಯ ಬೇಕು’ ಎಂದು ಆಗ್ರಹಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಶಾಯಿಸ್ತಾ ದಂಪತಿಗೆ ಸೇರಿದ 3 ಕೋಟಿ ರೂ. ಬಿಲ್ಡಿಂಗ್ ಅನ್ನು ಕೇವಲ 1.41 ಕೋಟಿ ರೂ.ಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು. ಕಳೆದ ಎರಡು ವರ್ಷಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಗೆ ಅಲೆಯುತ್ತಿದ್ದೇವೆ. ನಮಗೆ ಜಮೀರ್ ಅವರು ನ್ಯಾಯ ಕೊಡಿಸಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.‌ 2016ರಲ್ಲಿ ಶುಂಠಿ ಬೆಳೆಯಲು ಬೆಂಗಳೂರು ಕೋ ಆಪರೇಟೀವ್ ಬ್ಯಾಂಕ್ ನಿಂದ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದೆವು. ಅಂದಿನಿಂದ ಈ ವರೆಗೆ ಬಡ್ಡಿ ಸೇರಿ 90 ಲಕ್ಷ ರೂ. ಮರುಪಾವತಿಸಿದ್ದೇವೆ. ಆರ್ಥಿಕ ಸಮಸ್ಯೆಯಾಗುತ್ತಿದ್ದ ಕಾರಣ ಬಡ್ಡಿ ದರ ಕಡಿಮೆ ಮಾಡಿಸಿಕೊಡುವಂತೆ ಸಚಿವ ಜಮೀರ್ ಅಹ್ಮದ್ ಅವರ ಬಳಿ ಹೋಗಿದ್ದೆವು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಬ್ಯಾಂಕ್‌ನಿಂದ ನಮಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಬಿಲ್ಡಿಂಗ್ ಅನ್ನು 1.41 ಕೋಟಿ ರೂ.ಗಳಿಗೆ ಹರಾಜು ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಶಾಯಿಸ್ತಾ ದಂಪತಿ ಪ್ರತಿಭಟಿಸಿದ್ದಾರೆ.

LEAVE A REPLY

Please enter your comment!
Please enter your name here