ಮಂಗಳೂರು: ತಣ್ಣೀರುಬಾವಿ ಬಳಿ 2014 ರಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿಯ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿ ವಿದ್ಯಾರ್ಥಿಯ ತಂದೆಯ ದೂರಿನ ಮೇರೆಗೆ ಸಿಬಿಐ ತಂಡ ಜ.11ರಂದು ಮಂಗಳೂರಿಗೆ ಆಗಮಿಸಿದೆ.
ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿಯಾಗಿದ್ದ ಕೇರಳ ಮೂಲದ ರೋಹಿತ್ ರಾಧಾಕೃಷ್ಣನ್ (22) ಅವರ ಮೃತದೇಹ 2014 ರ ಮಾರ್ಚ್ 23 ರಂದು ತಣ್ಣೀರು ಬಾವಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಮೀಪ ಪತ್ತೆಯಾಗಿತ್ತು. ರೋಹಿತ್ ಶವ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬೈಕ್ ನಲ್ಲಿ ಸಾಗುವಾಗ ಅತಿ ವೇಗದಿಂದ ಮರಕ್ಕೆ ಡಿಕ್ಕಿಯಾಗಿ ರುಂಡ-ಮುಂಡ ಬೇರ್ಪಟ್ಟಿರಬೇಕು ಎಂಬ ಶಂಕೆ ವ್ಯಕ್ತವಾಗಿ, ಪಣಂಬೂರು ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದ ರೋಹಿತ್ ಅವರ ತಂದೆ ರಾಧಾಕೃಷ್ಣನ್ ಅವರು “ಇದು ಅಪಘಾತವಲ್ಲ, ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ರಾಜ್ಯ ಗೃಹ ಸಚಿವರಿಗೂ ದೂರು ನೀಡಿ, ನ್ಯಾಯಕ್ಕೆ ಆಗ್ರಹಿಸಿದ್ದರು. ಆದರೂ ಈ ಪ್ರಕರಣದಲ್ಲಿ ಸಮರ್ಪಕ ನ್ಯಾಯ ಸಿಕ್ಕಿಲ್ಲ ಎಂದು ರಾಧಾಕೃಷ್ಣ ಅವರು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ದಳ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಜ.11ರಂದು ಮಧ್ಯಾಹ್ನ ಸಿಬಿಐ ಸಿಬ್ಬಂದಿ ತಂಡ ತಣ್ಣೀರುಬಾವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.