ಮಂಗಳೂರು(ಚಿಕ್ಕಮಗಳೂರು): ಕೊಟ್ಟಿಗೆಹಾರ ಚಾರ್ಮಾಡಿ ಘಾಟಿಯಲ್ಲಿ ಸೋಮನಕಾಡು ಸಮೀಪ ವೀವ್ ಪಾಯಿಂಟ್ ನಲ್ಲಿ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ 1,000 ಅಡಿಗಿಂತಲೂ ಅಧಿಕ ಆಳದ ಪ್ರಪಾತಕ್ಕೆ ಬಿದ್ದ ಘಟನೆ ಜ.12ರ ಮಧ್ಯರಾತ್ರಿ ನಡೆದಿದೆ. ಘಟನೆಯಲ್ಲಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾನೆ.
ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ಟಿಪ್ಪರ್ ಮಂಜು ಕವಿದ ವಾತಾವರಣವಿದ್ದರಿಂದ ದಾರಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ರಭಸಕ್ಕೆ ಟಿಪ್ಪರ್ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕನಿಗೆ ಸೊಂಟಕ್ಕೆ ತುಂಬಾ ಪೆಟ್ಟಾಗಿದ್ದು ಆ್ಯಂಬುಲೆನ್ಸ್ ಮೂಲಕ ಉಜಿರೆಯ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಗಸ್ತು ಅಧಿಕಾರಿ ಅಭಿ, ಸಮಾಜ ಸೇವಕ ಆರಿಫ್ ಹಾಗೂ ಕುಂಞಿಮೋನು ತೆರಳಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.