ಮಂಗಳೂರು: ದ.ಕ.ಜಿಲ್ಲೆಯ ಸಂಸತ್ ಸ್ಥಾನಕ್ಕೆ ಈ ಬಾರಿ ನಳಿನ್ ಕುಮಾರ್ ಕಟೀಲು ಅವರಿಗೆ ಸೀಟು ಕೊಡಬೇಕು. ನಾನು ಚುನಾವಣೆಗೆ ನಿಲ್ಲುವುದಕ್ಕೆ ಹೋಗೋಲ್ಲ. ನಾನೇ ಬರುತ್ತೇನೆ. ಆದರೆ ಅವರಿಗೆ ಚುನಾವಣೆಯಲ್ಲಿ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಂಗಳೂರಿನಲ್ಲಿ ಹೇಳಿದ್ದಾರೆ.
ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಕೊಡುವುದಿಲ್ಲ ಅಂದಿದ್ದರು. ಆದರೆ ನಾವು ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಟೀಕೆ ಮಾಡಿದವರ ಹಣೆಬರಹಕ್ಕೆ ಇಂತಹ ಒಂದೂ ಕಾರ್ಯಕ್ರಮ ಕೊಟ್ಟಿಲ್ಲ. ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನು ಅಡ ತೆಗೆದುಕೊಂಡಂತೆ ಮಾಡುತ್ತಿದ್ದಾರೆ. ಅವರು ಯುವಕರ ಆಶಾಕಿರಣ. ಬಿಜೆಪಿಯವರು ಸ್ವಾಮಿ ವಿವೇಕಾನಂದರು ದುರ್ಬಳಕೆ ಮಾಡಿದ್ದಕ್ಕೆ ಅವರಿಗೆ ಈಗ ಶಿಕ್ಷೆಯಾಗಿದೆ.
ನಳಿನ್ ಕಟೀಲು ಚರಂಡಿ-ಕಾಲುವೆ ನೋಡಬೇಡಿ, ಹೊಡಿಬಡಿ ಅಂದಿದ್ದರು. ನಾವು ಯುವಕರಿಗಾಗಿ ಯುವನಿಧಿ ಯೋಜನೆ ನೀಡಿದ್ದೇವೆ. ಯುವಕರಿಗೆ ಸಿದ್ದರಾಮಯ್ಯನವರು ಉತ್ತಮ ಕಾರ್ಯಕ್ರಮ ಕೊಟ್ಟಿದ್ದಾರೆ. ಉದ್ಯೋಗ ಸೃಷ್ಠಿಯಲ್ಲಿ ಕೇಂದ್ರ ಸರಕಾರ ಹಿಂದೆ ಬಿದ್ದಿದೆ. ದೇಶದಲ್ಲಿ ನಿರುದ್ಯೋಗ ಹತ್ತು ಪರ್ಸೆಂಟ್ ಆಗಿದೆ, ಇದು ಬಿಜೆಪಿ ಸಾಧನೆ. ಜನ ಬಡತನದಲ್ಲಿ ಓದಿರುತ್ತಾರೆ. ಎಷ್ಟೋ ಮಂದಿ ಡಿಗ್ರಿ ಮಾಡಿದವರು ಕೂಲಿ ಮಾಡುತ್ತಿದ್ದಾರೆ. ಇಂಥವರಿಗೆ ಕೈಹಿಡಿಯಬೇಕೆಂದು ಎರಡು ವರ್ಷ ಭತ್ಯೆ ಕೊಡುತ್ತಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಯನ್ನು ಬಿಜೆಪಿ ಬೋಗಸ್ ಕ್ರೆಡಿಟ್ ಕಾರ್ಡ್ ಅಂದಿದ್ದರು. ನಳಿನ್ ಯಾವುದೋ ಕಾರಣಕ್ಕೆ ನನ್ನ ರಾಜೀನಾಮೆ ಕೇಳಿದ್ದರು. ಮಾನ ಮರ್ಯಾದೆ ಇದ್ದರೆ ಅವರೇ ರಾಜೀನಾಮೆ ಕೊಡಬೇಕಿತ್ತು. ಬಿಜೆಪಿಗೆ ಸೋಲಿಗೆ ನಳಿನ್ ಕುಮಾರ್ ಕಟೀಲು ಅವರೇ ಕಾರಣ. 2004ರಲ್ಲಿ ಬಂಗಾರಪ್ಪ ನೀಡಿರುವ ಭಿಕ್ಷೆಯಲ್ಲಿ ಬಿಜೆಪಿ ಅಧಿಕಾರ ನೋಡಿದವರು. ಪ್ರವೀಣ್ ನೆಟ್ಟಾರು ಸಾವಿನ ಸಂದರ್ಭ ನಳಿನ್ ವಿರುದ್ಧ ಘೋಷಣೆ ಕೂಗಿದವರು, ಅವರ ಕಾರು ಪಂಕ್ಚರ್ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರಲ್ಲ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು. ಕಟೀಲ್ ಅವರಿಗೆ ಹೇಸಿಗೆ ಆಗಬೇಕು ಎಂದು ಮಧು ಬಂಗಾರಪ್ಪ ಹೇಳಿದರು.