ಹಾಡು ಹಳೆಯದಾದರೇನು? ಹಳೆಯ ಕನ್ನಡ ಹಾಡಿಗೆ ಪ್ರಧಾನಿ ಮೋದಿ ಫಿದಾ-ಶೋತೃಗಳ ಸಂಖ್ಯೆಯಲ್ಲಿ ಏರಿಕೆ

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ 1974ರಲ್ಲಿ ತೆರೆಕಂಡ ‘ಎರಡು ಕನಸು’ ಚಿತ್ರದ ಹಾಡೊಂದಕ್ಕೆ ಬೇಡಿಕೆ ಜಾಸ್ತಿಯಾಗಿದ್ದು ಶೋತೃಗಳ ಸಂಖ್ಯೆ ಏರಿಕೆಯಾಗಿದೆ. ರಾಮನಾಮವನ್ನು ಜಪಿಸುವ ಈ ಹಾಡನ್ನು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ತನ್ನದೇ ಸ್ವರದಲ್ಲಿ ಭಾವನಾತ್ಮಕವಾಗಿ ಹಾಡಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದರು. ‘ಪೂಜಿಸಲೆಂದೇ ಹೂಗಳ ತಂದೆ’ ಎಂಬ ಈ ಹಾಡಿಗೆ ಪ್ರಧಾನಿ ಮೋದಿ ತಲೆದೂಗಿದ್ದಾರೆ. ಅಲ್ಲದೆ ಈ ಹಾಡಿನ ಲಿಂಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಶಿವಶ್ರೀ ಸ್ಕಂದಪ್ರಸಾದ್ ಅವರ ಈ ಹಾಡು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ ಎಂದು ಹಾಡಿ ಹೊಗಳಿದ್ದಾರೆ.

‘ಪೂಜಿಸಲೆಂದೇ ಹೂಗಳ ತಂದೆ’ ಹಾಡು ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಚಿತ್ರದ ಹಾಡು. ಡಾ.ರಾಜಕುಮಾರ್‌ ಆಬಿನಯದ ಕನ್ನಡದ ಶ್ರೇಷ್ಠ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಈ ಸಿನಿಮಾ 1974ರಲ್ಲಿ ತೆರೆ ಕಂಡಿತ್ತು. ಚಿ. ಉದಯಶಂಕರ್ ಸಾಹಿತ್ಯ ರಚಿಸಿದ್ದು, ಖ್ಯಾತ ಗಾಯಕಿ ಎಸ್. ಜಾನಕಿ ಸ್ವರ ನೀಡಿರುವ ಈ ಹಾಡನ್ನು ಕಲ್ಪನಾ ಅವರ ಮೇಲೆ ಚಿತ್ರೀಕರಿಸಲಾಗಿದೆ.

ಶಿವಶ್ರೀ ಕಲಾವಿದರ ಕುಟುಂಬದಿಂದ ಬಂದವರಾಗಿದ್ದು, ಸಣ್ಣ ವಯಸ್ಸಿನಿಂದಲೇ ಸಂಗೀತದ ಬಗ್ಗೆ ಒಲವು ಹೊಂದಿದ್ದರು. ಶಾಸ್ತ್ರೀಯ ಸಂಗೀತ, ಭರತನಾಟ್ಯವನ್ನು ಕಲಿತಿರುವ ಶಿವಶ್ರೀ ಅವರ ತಾತ ಖ್ಯಾತ ಸಂಗೀತಕಾರರಾಗಿದ್ದರು. ಶಿವಶ್ರೀ ಅವರ ತಂದೆ ಖ್ಯಾತ ಮೃದಂಗ ವಾದಕ ವಿದ್ವಾನ್ ಸೀರ್ಕಾಜಿ ಜೆ. ಸ್ಕಂದಪ್ರಸಾದ್. ಶಿವಶ್ರೀ ಅವರು ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಲ್ಲಿ ಸಂಗೀತ  ಕಲಿತಿದ್ದಾರೆ. ರೋಜಾ ಕಣ್ಣನ್ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ.

https://x.com/narendramodi/status/1747091236249546842?s=20

ಶಿವಶ್ರೀ ಬಯೋ-ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎ ಭರತನಾಟ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಡಿಪ್ಲೊಮಾ ಪಡೆದಿದ್ದಾರೆ. ಸದ್ಯ ಅವರು ಅಮೇರಿಕಾದಲ್ಲಿ ವಾಸವಾಗಿದ್ದಾರೆ.

 

LEAVE A REPLY

Please enter your comment!
Please enter your name here