ಮಂಗಳೂರು ಬಂದೀಖಾನೆಯಲ್ಲಿ ಮಕರ ಸಂಕ್ರಾಂತಿ ಆಚರಣೆ-ದ.ಕ ವಯಸ್ಕರ ಶಿಕ್ಷಣ ಸಮಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಚಿಂತನ ಸಾಂಸ್ಕೃತಿಕ ಬಳಗದಿಂದ ವಿಶೇಷ ಕಾರ್ಯಕ್ರಮ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಬಂಟ್ವಾಳದ ಮೂಡಂಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಅರವಿಂದ ಕುಡ್ಲ ಮತ್ತು ಬೈಕಂಪಾಡಿ ಸರ್ಕಾರಿ ಪ್ರೌಢ ಶಿಕ್ಷಣ ಶಾಲೆಯ ಶಿಕ್ಷಕ ಪ್ರೇಮನಾಥ್ ಆಚಾರ್ಯ ನೇತೃತ್ವದಲ್ಲಿ ಯುವ ಕಲಾವಿದರ ತಂಡ ಜಾಗೃತಿ, ಜಾನಪದ ಗೀತೆ ಮತ್ತು ಲಾವಣಿಗಳ ಮೂಲಕ ವಿಚಾರಣಾಧೀನ ಖೈದಿಗಳ ಮನ ರಂಜಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಾಗೃಹದ ಅಧೀಕ್ಷಕ ಓಬಳೇಶಪ್ಪ ವಹಿಸಿದ್ದರು. ವಿಚಾರಣಾಧೀನ ಖೈದಿಗಳ ಮನದಲ್ಲಿ ಪರಿವರ್ತನೆ ತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದೊಂದು ಅಪೂರ್ವ ಕಾರ್ಯಕ್ರಮ ಎಂದು ಓಬಳೇಶಪ್ಪ ಅವರು ಶ್ಲಾಘಿಸಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲ ಸುಕೇಶ್ ಕುಮಾರ್ ಶೆಟ್ಟಿ ಪ್ರಾಧಿಕಾರದಿಂದ ದೊರೆಯುವ ಕಾನೂನು ನೆರವಿನ ಬಗ್ಗೆ ವಿವರಿಸಿದರು.  ಕೆನರಾ ಹೈಸ್ಕೂಲ್ ಮತ್ತು ಸಂತ ಅಲೋಷಿಯಸ್ ಹೈಸ್ಕೂಲ್‌ನ ವಿದ್ಯಾರ್ಥಿಗಳು ರಂಗ ಗೀತೆ, ಜಾನಪದ ಗೀತೆಗಳನ್ನು ಹಾಡಿ ವಿಚಾರಣಾಧೀನ ಖೈದಿಗಳಲ್ಲಿ ಜಾಗೃತಿ ಮೂಡಿಸಿದರು. ಹಬ್ಬದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖೈದಿಗಳೂ ಚಪ್ಪಾಳೆ ತಟ್ಟಿ, ಹಾಡಿಗೆ ದನಿಗೂಡಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here