ಮಂಗಳೂರು(ಗಂಗಾವತಿ): ಜ.22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನಮೂರ್ತಿ ಪ್ರತಿಷ್ಠಾಪನೆಯಾಗುತ್ತಿರುವ ಹೊತ್ತಿನಲ್ಲಿಯೇ ಗಂಗಾವತಿ ತಾಲ್ಲೂಕಿನಲ್ಲಿರುವ ಅಯೋಧ್ಯೆ ಎನ್ನುವ ಊರಿನ ಹೆಸರು ಜಿಲ್ಲೆಯಲ್ಲಿ ಮುನ್ನೆಲೆಗೆ ಬಂದಿದೆ.
ಗಂಗಾವತಿ ತಾಲೂಕಿನಲ್ಲಿ ಹನುಮ ಜನಿಸಿದ ನಾಡು ಅಂಜನಾದ್ರಿ, ಪಂಪಾಸರೋವರ ಸೇರಿದಂತೆ ರಾಮಾಯಣ ಕಾಲಕ್ಕೆ ಸಂಬಂಧಿಸಿದ ಊರುಗಳಿವೆ. ಈಗ ಇದೇ ತಾಲೂಕಿನಲ್ಲಿ ಅಯೋಧ್ಯೆ ಎನ್ನುವ ಹೆಸರಿನ ಊರು ಇರುವುದು ಕುತೂಹಲ ಮೂಡಿಸಿದೆ. ಗ್ರಾಮಕ್ಕೆ ಯಾಕೆ ಈ ಹೆಸರು ಬಂತು ಎನ್ನುವ ಬಗ್ಗೆ ಯಾರಲ್ಲೂ ಮಾಹಿತಿಯಿಲ್ಲ.
ಇತ್ತೀಚೆಗಿನ ವರ್ಷಗಳಲ್ಲಿ ಊರು ಹೊಸ ಹಾಗೂ ಹಳೆಯ ಆಯೋಧ್ಯೆ ಎಂದು ಹಂಚಿಹೋಗಿವೆ. ಪುರಾತನ ಕಾಲದ ರಾಮಮಂದಿರವಿದ್ದು, ಈ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮ ಹಾಗೂ ಸುಗ್ರೀವನ ಮೂರ್ತಿಗಳಿವೆ. ಗ್ರಾಮದಲ್ಲಿ ಹಂಪಿಯಲ್ಲಿರುವಂತೆ ಪಂಪಾಪತಿ, ಈಶ್ವರ, ಭೀಮಕೊಂಡ, ಆಂಜನೇಯ, ಗಂಗಾಮಾತಾ ದೇವಾಲಯಗಳಿವೆ. ತುಂಗಭದ್ರಾ ನದಿಯಲ್ಲಿ ಚಿದಾನಂದ ಅವಧೂತರ ಕಟ್ಟೆಯು ಇದೆ. ಗ್ರಾಮದ ಹಿರಿಯರ ಪ್ರಕಾರ ವಿಜಯನಗರ ಅರಸರ ಕಾಲದಲ್ಲಿ ಈ ಗ್ರಾಮದಲ್ಲಿ ದೇವಾಲಯ ನಿರ್ಮಾಣವಾಗಿದೆ. ಇತಿಹಾಸ ತಜ್ಞರು ಹಾಗೂ ಸಂಶೋಧಕರು ಅಯೋಧ್ಯೆ ಎನ್ನುವ ಹೆಸರು ಹೇಗೆ ಬಂತು ಎನ್ನುವ ಬಗ್ಗೆ ಬೆಳಕು ಚೆಲ್ಲಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.