ದೇವನಹಳ್ಳಿಯಲ್ಲಿ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಮಂಗಳೂರು/ಬೆಂಗಳೂರು: ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿ.ಮಾರೇನಹಳ್ಳಿ ಗ್ರಾಮದಲ್ಲಿ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್​ನ್ನು ಪ್ರಧಾನಿ ನರೇಂದ್ರ ಮೋದಿ ಜ.19ರಂದು ಕ್ಯಾಂಪಸ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಕೊಡುಗೆ ಬಹಳ ಇದೆ. ಮೇಕ್ ಇನ್ ಇಂಡಿಯಾ ಸಂಕಲ್ಪವನ್ನು ಸಶಕ್ತೀಕರಣಗೊಳಿಸುತ್ತದೆ. ಭವಿಷ್ಯದ ದಿನದಲ್ಲಿ ಏರ್​ಕ್ರಾಫ್ಟ್​​ನ ಡಿಸೈನ್ ಕೂಡ ಭಾರತ ಮಾಡಲಿದೆ. ಭಾರತದ ಯುವಸಮೂಹವನ್ನು ವಿಶೇಷ ಅಭಿನಂದನೆ ಸಲ್ಲಿಸುತ್ತೇವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಿಮಗೆ ಹೊಸ ಅವಕಾಶಗಳು ಬರುತ್ತಿದೆ. ಭಾರತದಲ್ಲಿ ಶೇ.15ರಷ್ಟು ಮಹಿಳಾ ಪೈಲಟ್​​ಗಳಿದ್ದಾರೆ. ಬಡ ವಿದ್ಯಾರ್ಥಿಗಳು ಪೈಲಟ್​ ಆಗುವ ಕನಸು ಇಂದು ನನಸಾಗುತ್ತಿದೆ ಎಂದು ಹೇಳಿದ್ದಾರೆ.ಬೋಯಿಂಗ್ ಸುಕನ್ಯಾ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಲಿದೆ. ಭಾರತ ಇಂದು ವಿಶ್ವದ 3ನೇ ಡೊಮೆಸ್ಟಿಕ್ ಮಾರ್ಕೆಟ್​ ಆಗಿದೆ. ವೈಮಾನಿಕ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಸಿಗುತ್ತಿವೆ. ಚಂದ್ರಯಾನ ಮೂಲಕ ಯಾವ ದೇಶವೂ ತಲುಪದ ಕಡೆ ತಲುಪಿದ್ದೇವೆ. ನಮ್ಮ ಸ್ಥಾನ ವಿಶ್ವದಲ್ಲಿ ಇನ್ನೂ ಮೇಲಿನ ಸ್ತರಕ್ಕೆ ಈ ಮೂಲಕ ಹೋಗಿದೆ ಎಂದಿದ್ದಾರೆ.

ಈ ಕ್ಯಾಂಪಸ್ ಬೋಯಿಂಗ್ ಕಂಪನಿಯ ಅತಿ ದೊಡ್ಡ ಹೂಡಿಕೆಯಾಗಿದೆ. 43 ಎಕರೆ ಪ್ರದೇಶದಲ್ಲಿ 1,600 ಕೋಟಿ ರೂ. ವೆಚ್ಚದಲ್ಲಿ ಕ್ಯಾಂಪಸ್​ ನಿರ್ಮಾಣ ಮಾಡಲಾಗಿದೆ. ಈ ವೇಳೆ ಬೋಯಿಂಗ್ ಸುಕನ್ಯಾ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದು, ದೇಶದ ಹೆಣ್ಣುಮಕ್ಕಳನ್ನು ಏವಿಯೇಷನ್ ಸೆಕ್ಟರ್​ನತ್ತ ಆಕರ್ಷಿಸುವ ಮತ್ತು ಮಹಿಳೆಯರಿಗೆ ತರಬೇತಿ ನೀಡಲು ಉತ್ತೇಜಿಸಲಾಗುತ್ತಿದೆ. ಬಿಐಇಟಿಸಿ ಕೇಂದ್ರದಿಂದ ಜಾಗತಿಕ ಏರೋಸ್ಪೇಸ್ ಉದ್ಯಮದ ಪ್ರಗತಿಗೆ ನೆರವು ನೀಡಲಾಗುತ್ತಿದೆ. 3,000ಕ್ಕೂ ಹೆಚ್ಚು ಇಂಜಿನಿಯರ್‌ಗಳನ್ನು ಹೊಂದುವ ಗುರಿಯನ್ನು ಬಿಐಇಟಿಸಿ ಹಾಕಿಕೊಂಡಿದೆ. ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಇಂಡಸ್ಟ್ರಿಯಲ್ ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಾಡೆಲ್ ಆಧಾರಿತ ಇಂಜಿನಿಯರಿಂಗ್ ಮತ್ತು ಅಡ್ಡಿಟಿವ್ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸಲಿದೆ.ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್​​ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ಆರ್​. ಅಶೋಕ್​ ಉಪಸ್ಥಿತರಿದ್ದರು.

ಬೋಯಿಂಗ್ ಸುಕನ್ಯಾ ಯೋಜನೆ
ದೇಶಾದ್ಯಂತ ಹೆಚ್ಚು ಹೆಣ್ಣು ಮಕ್ಕಳು ವೈಮಾನಿಕ ವಲಯಕ್ಕೆ ಸೇರಲು ನೆರವಾಗುವ ಉದ್ದೇಶ ಹೊಂದಿರುವ ಬೋಯಿಂಗ್ ಸುಕನ್ಯಾ ಯೋಜನೆ. ಈ ಕಾರ್ಯಕ್ರಮ ಹೆಣ್ಣು ಮಕ್ಕಳಿಗೆ ಪ್ರಮುಖ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ಕೌಶಲಗಳನ್ನು ಸಂಪಾದಿಸಲು ಅವಕಾಶ ಕಲ್ಪಿಸಲಿದೆ. ಹೆಣ್ಣು‌ಮಕ್ಕಳನ್ನು ವೈಮಾನಿಕ ಉದ್ಯೋಗಗಳಿಗೆ ಸಿದ್ಧಗೊಳಿಸಲಿದೆ.ಬಾಲಕಿಯರಿಗಾಗಿ ಬೋಯಿಂಗ್ ಸುಕನ್ಯಾ ಯೋಜನೆ 150 ಸ್ಥಳಗಳಲ್ಲಿ ಕೌಶಲ್ಯ ತರಬೇತಿ ಪ್ರಯೋಗಾಲಯಗಳನ್ನು ತೆರೆಯಲಿದೆ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಉತ್ತೇಜನ ನೀಡಲಿರುವ ಯೋಜನೆ. ಈ ಯೋಜನೆಯಡಿ ಪೈಲಟ್ ಆಗಲು ತರಬೇತಿ ಪಡೆಯುತ್ತಿರುವ ಬಾಲಕಿಯರಿಗೂ ವಿದ್ಯಾರ್ಥಿ ವೇತನ ಸಿಗಲಿದೆ.

 

 

 

LEAVE A REPLY

Please enter your comment!
Please enter your name here