ಮಂಗಳೂರು(ಅಯೋಧ್ಯೆ): ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ವಿಗ್ರಹದ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿದೆ.
ಪ್ರಾಣಪ್ರತಿಷ್ಠಾಪನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಆರತಿ ಬೆಳಗಿ ಮೊದಲ ಪೂಜೆ ನೆರವೇರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಉಡುಪಿ ಮಠಾಧೀಶ ಪೇಜಾವರ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಸೇರಿದಂತೆ ಮುನಿವರ್ಯರು, ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಲಾಯಿತು.
ರಾಮಮಂದಿರ ಜ.23 ರಿಂದ ಅಯೋಧ್ಯೆಯ ಈ ಬಾಲರಾಮ ಮಂದಿರದ ಬಾಗಿಲು ಭಕ್ತರಿಗಾಗಿ ತೆರೆದುಕೊಳ್ಳಲಿದ್ದು, ಎರಡು ಹಂತಗಳಲ್ಲಿ ಶ್ರೀರಾಮನ ದರ್ಶನ ಮಾಡಬಹುದಾಗಿದೆ. ಬೆಳಗ್ಗೆ 7:00 ರಿಂದ 11:30ರವರೆಗೆ ಮತ್ತು ಮಧ್ಯಾಹ್ನ 02:00 ರಿಂದ ಸಂಜೆ 07:00 ರವರೆಗೆ ದರ್ಶನ ಪಡೆಯಬಹುದಾಗಿದೆ. ಬಾಲರಾಮನಿಗೆ ಪ್ರತಿದಿನ 3 ಬಾರಿ ಆರತಿ ಬೆಳಗಲಾಗುವುದು. ಬೆಳಗ್ಗೆ 06:30ಕ್ಕೆ ಶೃಂಗಾರ ಆರತಿ, ಮಧ್ಯಾಹ್ನ 12:00 ಕ್ಕೆ ಭೋಗ್ ಆರತಿ ಮತ್ತು ಸಂಜೆ 07:30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ.
ಲಭ್ಯತೆಯ ಆಧಾರದ ಮೇಲೆ ಭಕ್ತರು ಆನ್‌ಲೈನ್ ಮೂಲಕ ಅಥವಾ ದೇವಸ್ಥಾನದಲ್ಲಿ ಆರತಿ ಪಾಸ್‌ಗಳನ್ನು ಪಡೆಯಬಹುದಾಗಿದೆ.
ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಪಾಸಿಗಾಗಿ ಲಾಗಿನ್ ಆಗಲು ನಿಮ್ಮ ಮೊಬೈಲ್ಗೆ ಒಟಿಪಿ ಸಂಖ್ಯೆ ಬರಲಿದೆ. ಆರತಿ ಅಥವಾ ದರ್ಶನಕ್ಕಾಗಿ ಸ್ಲಾಟ್ ಬುಕ್ ಮಾಡಲು ‘ಮೈ ಪ್ರೊಫೈಲ್’ಗೆ ನ್ಯಾವಿಗೇಟ್ ಮಾಡಬೇಕು. ಅಗತ್ಯ ರುಜುವಾತುಗಳನ್ನು ಒದಗಿಸುವುದರೊಂದಿಗೆ ದರ್ಶನ ಬಯಸಿದ ದಿನಾಂಕ ಮತ್ತು ಆರತಿ ಸಮಯವನ್ನು ಆರಿಸಿಕೊಳ್ಳಬೇಕು. ನಿಗಧಿತ ದಿನ ಆರತಿಗೂ ಮೊದಲು ದೇವಾಲಯದ ಆವರಣದಲ್ಲಿರುವ ಕೌಂಟರ್‌ನಿಂದ ನಿಮ್ಮ ಪಾಸ್ ಅನ್ನು ಸಂಗ್ರಹಿಸಿಕೊಳ್ಳಬೇಕು.