ಅಪಘಾತ ನಡೆಸಿ ವಾಗ್ವಾದ – ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನ ಎಳೆದೊಯ್ದ ಚಾಲಕ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಂಗಳೂರು/ಬೆಂಗಳೂರು : ಅಪಘಾತವೆಸಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾರು ಚಾಲಕನೊಬ್ಬ ಕ್ಯಾಬ್ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲಿರಿಸಿಕೊಂಡು ಕೊಂಡೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜನವರಿ 15ರಂದು ರಾತ್ರಿ ಮಲ್ಲೇಶ್ವರಂನ 18ನೇ ಕ್ರಾಸ್​ನಲ್ಲಿ ಘಟನೆ ನಡೆದಿದ್ದು, ಕಾರಿನ ಬಾನೆಟ್ ಮೇಲೆ ಬಿದ್ದ ಅಶ್ವಥ್ ಎಂಬಾತನನ್ನು ಮೊಹಮ್ಮದ್ ಮುನೀರ್ ಎಂಬ ಕಾರು ಚಾಲಕ ಸುಮಾರು 400 ಮೀಟರುಗಳಷ್ಟು ದೂರ ಎಳೆದೊಯ್ದಿದ್ದಾನೆ. ಆರೋಪಿಯ ಪುಂಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಶ್ವಥ್ ಎಂಬಾತನ ಕ್ಯಾಬ್​ಗೆ ಮಲ್ಲೇಶ್ವರಂನ ಸರ್ಕಲ್​ನಲ್ಲಿರುವ ಮಾರಮ್ಮ ದೇವಸ್ಥಾನದ ಬಳಿ ಮೊಹಮ್ಮದ್ ಮುನೀರ್ ಎಂಬಾತನ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಮುನೀರ್​ನ ಕಾರನ್ನು ನಿಲ್ಲಿಸುವಂತೆ ಅಶ್ವಥ್ ಕೇಳಿದ್ದ. ಕಾರು ನಿಲ್ಲಿಸದೆ ಎಸ್ಕೇಪ್ ಆಗಲು ಯತ್ನಿಸಿದಾಗ ಕಾರಿನ ಮುಂದೆ ಬಂದು ನಿಂತಿದ್ದ ಅಶ್ವಥ್ ಕೆಳಗಿಳಿಯುವಂತೆ ಆರೋಪಿ ಮುನೀರ್​ಗೆ ತಿಳಿಸಿದ್ದ. ಆದರೆ ಕೆಳಗಿಳಿಯದ ಮುನೀರ್ ತಕ್ಷಣ ಕಾರು ಚಲಾಯಿಸಿದ್ದಾನೆ. ಈ ವೇಳೆ ಬಾನೆಟ್ ಮೇಲೆ ಕುಳಿತ ಕ್ಯಾಬ್ ಚಾಲಕ ಅಶ್ವಥ್​ನನ್ನು ಹಾಗೆಯೇ ಕೊಂಡೊಯ್ದಿದ್ದಾನೆ.

ಮಲ್ಲೇಶ್ವರಂ 18ನೇ ಕ್ರಾಸ್ ಸಿಗ್ನಲ್​ವರೆಗೂ ಆರೋಪಿ ತನ್ನ ಕಾರು ಚಲಾಯಿಸಿದ್ದು, ಸ್ಥಳೀಯರು ಹಿಂದೆ ಓಡಿದರೂ ಕಾರು ನಿಲ್ಲಿಸಿಲ್ಲ. ಅಲ್ಲದೆ ಮಧ್ಯದಲ್ಲಿ ಸಡನ್ ಆಗಿ ಬ್ರೇಕ್ ಹಾಕಿ ಅಶ್ವಥ್​ನನ್ನು ಬೀಳಿಸಲು ಯತ್ನಿಸಿದ್ದಾನೆ. ನಂತರ ಟ್ರಾಫಿಕ್ ಸಿಗ್ನಲ್ ಬಳಿ ಆರೋಪಿಯ ಕಾರನ್ನು ಸ್ಥಳೀಯರು ಅಡ್ಡಗಟ್ಟಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರಂ ಠಾಣಾ ಹೊಯ್ಸಳ ಸಿಬ್ಬಂದಿ ಕಾರು ಚಾಲಕನನ್ನು ವಶಕ್ಕೆ ಪಡೆದು ಎನ್.ಸಿ.ಆರ್ ದಾಖಲಿಸಿಕೊಂಡಿದ್ದಾರೆ.

“ಪ್ರಕರಣ ಸಂಬಂಧ ಇದುವರೆಗೂ ಯಾರೂ ದೂರು ನೀಡಿಲ್ಲ. ಸದ್ಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ನಂತರ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್ ಅನುಚೇತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here