ಮಂಗಳೂರು: ಮುಂದಿನ ತಿಂಗಳು ಕಾಂಗ್ರೆಸ್ ಸಮಾವೇಶ ಮಂಗಳೂರಿನಲ್ಲಿ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೆಹಲಿಯ ನಾಯಕರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಸಮಾವೇಶದ ಹಿನ್ನಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ್ದ ಡಿಕೆ ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿಯ ಕಾಂಗ್ರೆಸ್ ಸಮಿತಿ ನಾವೇ ಕಾರ್ಯಕ್ರಮ ಮಾಡುವುದಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತನಾಡಿ ನಾಳೆ ಸಮಾವೇಶದ ದಿನಾಂಕವನ್ನು ನಿಗದಿಪಡಿಸುವುದಾಗಿ ಹೇಳಿದರು.
ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಆಗೋದು ಸುಳ್ಳು. ಬಿಜೆಪಿಯಲ್ಲೇ ಶೇಕ್ ಆಗಿದ್ದು, ಆಂತರಿಕ ಸಮಸ್ಯೆಗಳು ಬಹಳಷ್ಟಿವೆ. ಶೆಟ್ಟರ್ ರನ್ನ ಸುಮ್ಮನೆ ಕೆಲವರು ಹೋಗಿ ಕರೆಯೋದು ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ದಡ್ಡರೇನಲ್ಲ. ಅವರಿಗೆ ಆಗಿದ್ದ ಅವಮಾನ, ನೋವು, ದುಃಖ ದುಮ್ಮಾನ ಎಲ್ಲಾ ಯೋಚನೆ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಬಂದು ನಮಗೆ ದೊಡ್ಡ ಸಹಾಯ ಕೂಡಾ ಮಾಡಿದ್ದಾರೆ. ಶೆಟ್ಟರ್ ಸೋತಿರಬಹುದು, ತಕ್ಷಣ ಕಾಂಗ್ರೆಸ್ ಪಕ್ಷ ಗುರುತಿಸಿ ವಿಧಾನ ಪರಿಷತ್ ಗೆ ಅವಕಾಶ ಮಾಡಿ ಕೊಟ್ಟಿದೆ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮೇಲೆ ಅನುಮಾನ ಬರಬೇಕು ಎಂಬ ದೊಡ್ಡ ಸಂಚು ಬಿಜೆಪಿಯವರು ಮಾಡಿದ್ದಾರೆ. ಆದರೆ ಬಿಜೆಪಿಯ ಸಂಚು ಫಲಿಸೋದಿಲ್ಲ ಎಂದು ಡಿಕೆಶಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಹೇಳಿದರು.
ಮೋದಿ ಉಪವಾಸದ ಬಗ್ಗೆ ವೀರಪ್ಪ ಮೊಯ್ಲಿ ಟೀಕೆ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅದರ ಬಗ್ಗೆ ನನಗೆ ಗೊತ್ತಿಲ್ಲ, ಅವರು ಹಿರಿಯರಿದ್ದಾರೆ,ಅವರ ಹತ್ತಿರಾನೆ ಮಾತನಾಡಬೇಕು ಎಂದರು. ಹಿಜಾಬ್ ನಿಷೇಧ ವಾಪಸ್ ಬಗ್ಗೆ ಮುಸ್ಲಿಂ ಮುಖಂಡರು ಹಕ್ಕೋತ್ತಾಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಹಿಜಾಬ್ ನಿಷೇಧ ವಾಪಸ್ ಪಡೆಯಲು ಕೇಳಿದ್ದಾರೆ. ಎಲ್ಲಾ ವಿಚಾರಗಳು ನ್ಯಾಯಾಲಯದಲ್ಲಿದೆ, ಅದರ ಬಗ್ಗೆ ಮಾತನಾಡಲ್ಲ. ಒಟ್ಟಾರೆ ನಾವು ಸಂವಿಧಾನ ಬದ್ಧವಾಗಿ ಎಲ್ಲಾ ಧರ್ಮಗಳನ್ನ ರಕ್ಷಣೆ ಮಾಡಬೇಕು. ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ಧರ್ಮವನ್ನೂ ರಕ್ಷಣೆ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ಸಲೀಂ ಅಹಮದ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.