ಮಂಗಳೂರು(ಬೆಂಗಳೂರು): ಎರಡಂತಸ್ತಿನ ಕಟ್ಟಡವೊಂದು ಅಗ್ನಿಗಾಹುತಿಯಾದ ಘಟನೆ ತಡರಾತ್ರಿ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳೆಪೇಟೆಯಲ್ಲಿ ನಡೆದಿದೆ. ಬೆಂಕಿ ತಗುಲಿದ ಕೆಲವೇ ನಿಮಿಷಗಳಲ್ಲಿ ಕಟ್ಟಡದಲ್ಲಿದ್ದ 30 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಕಟ್ಟಡದ ಕೆಳ ಮಹಿಡಿಯಲ್ಲಿದ್ದ ಪೈಂಟ್ ಶಾಪ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಮೊದಲ ಮಹಡಿಯಲ್ಲಿದ್ದ ಬ್ಯಾಗ್ ಅಂಗಡಿಗೆ ಬೆಂಕಿ ವ್ಯಾಪಿಸಿದೆ. ಈ ವೇಳೆ ಕಟ್ಟಡದ ಒಳಗೆ ಪ್ರವೇಶಿಸಿದ್ದ ಯುವಕ ಹೊರಬರಲಾರದೆ ಸಿಲುಕಿಕೊಂಡಿದ್ದನು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಕಟ್ಟಡದ ಶೆಟರ್ಸ್ ಮುರಿದು ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಕೈಗೊಂಡ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೈಂಟ್ ಅಂಗಡಿ ಮಾಲೀಕ ಕೃಷ್ಣಮೂರ್ತಿ ಕುಟುಂಬಸ್ಥರು, ’20 ವರ್ಷಕ್ಕೂ ಹಿಂದಿನಿಂದ ಇದೇ ಕಟ್ಟಡದಲ್ಲಿ ಪೈಂಟ್ ವ್ಯಾಪಾರ ಮಾಡುತ್ತಿದ್ದೆವು. ಇದೇ ಮೊದಲ ಬಾರಿಗೆ ಈ ಅನಾಹುತವಾಗಿದೆ’ ಎಂದು ಕಣ್ಣೀರು ಹಾಕಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಉಪ್ಪಾರಪೇಟೆ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.