ಮಂಗಳೂರು(ಮಂಡ್ಯ): ಗ್ರಾಮದಲ್ಲಿ ಹಾರಿಸಲಾಗಿದ್ದ ಕೇಸರಿ ಧ್ವಜವನ್ನು ತಾಲೂಕು ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದು, ಹಿಂದೂ ಸಂಘಟನೆ ಕಾರ್ಯಕರ್ತರು ಅಡ್ಡಿಪಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದಿದೆ. ಕೇಸರಿ ಧ್ವಜ ತೆರವಿಗೆ ಅಡ್ಡಿ ಪಡಿಸಿದ ಸಂಘಟನೆ ಕಾರ್ಯಕರ್ತರು ದಾಂಧಲೆ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಗ್ರಾಮದಲ್ಲಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಅಯೋಧ್ಯೆಯಲ್ಲಿ ನಡೆದ ರಾಮ ಪ್ರಾಣ ಪ್ರತಿಷ್ಠ ಕಾರ್ಯಕ್ರಮದ ಸಂಭ್ರಮದಲ್ಲಿ ಜನವರಿ 22ರಂದು ಕೆರಗೋಡು ಗ್ರಾಮದ ಸರಕಾರಿ ಜಾಗದಲ್ಲಿ ಸಂಘಟನೆ ಕಾರ್ಯಕರ್ತರು ಕೇಸರಿ ಧ್ವಜ ಹಾರಿಸಿದ್ದರು. ಇದಕ್ಕೆ ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಸರಕಾರಿ ಜಾಗದಲ್ಲಿರುವ ಧ್ವಜಸ್ಥಂಭವನ್ನು ತೆರವುಗೊಳಿಸಲು ಆಗ್ರಹ ಕೇಳಿಬಂದಿತ್ತು. ಅಲ್ಲದೆ, ಸರ್ಕಾರಿ ಜಾಗದಲ್ಲಿ ಧ್ವಜಸ್ಥಂಭ ನೆಡಬಾರದೆಂದು, ಅದನ್ನು ತೆರವುಗೊಳಿಸಲು ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಸೂಚನೆ ನೀಡಿದ್ದರು. ಹೀಗಾಗಿ, ಭಾನುವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಗ್ರಾಮಕ್ಕೆ ತೆರಳಿ, ಧ್ವಜ ಮತ್ತು ಧ್ವಜಸ್ಥಂಭ ತೆರವಿಗೆ ಮುಂದಾಗಿದ್ದಾರೆ.
ಆದರೆ, ಸಂಘಟನೆ ಕಾರ್ಯಕರ್ತರು ತೆರವಿಗೆ ಅಡ್ಡಿಪಡಿಸಿದ್ದಾರೆ. ಧ್ವಜಸ್ಥಂಭವನ್ನು ತೆರವುಗೊಳಿಸಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ. ಹಿಂದುತ್ವವಾದಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಚಲುವರಾಯಸ್ವಾಮಿ, “ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜ ಹಾರಿಸಲು ಪಂಚಾಯತ್ ನಿಂದ ಅನುಮತಿ ಪಡೆದುಕೊಂಡಿದ್ದರು. ಆದರೆ, ಜನವರಿ 26ರಂದು ರಾಷ್ಟ್ರಧ್ವಜವನ್ನು ಇಳಿಸಿ, ಕೇಸರಿ ಧ್ವಜ ಹಾರಿಸಿದ್ದಾರೆ” ಎಂದು ಹೇಳಿದ್ದಾರೆ.