ಮಂಗಳೂರು(ಗೋಳಿಯಂಗಡಿ): ಸಾಲಿಡ್ ಬಶೀರ್ ಎಂಬಾತನಿಗೆ ಸೇರಿದ ಸುಡುಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳ ನಿವಾಸಿಗಳಾದ ಸ್ವಾಮಿ(55), ವರ್ಗೀಸ್(68) ಮತ್ತು ಹಾಸನ ಅರಸಿಕೆರೆ ನಿವಾಸಿ ಚೇತನ್(25) ಎಂದು ಗುರುತಿಸಲಾಗಿದೆ. ಘಟನೆಯ ವೇಳೆ 9 ಮಂದಿ ಕಾರ್ಮಿಕರು ಸ್ಪೋಟಕ ತಯಾರಿಸುತ್ತಿದ್ದರು ಎನ್ನಲಾಗಿದೆ.
ಸ್ಫೋಟದ ತೀವ್ರತೆ ಗೆ ದೇಹಗಳು ಛಿದ್ರ ಛಿದ್ರವಾಗಿದ್ದು ಅಡಿಕೆ ಗಿಡದ ಬುಡದಲ್ಲಿ ದೇಹದ ಭಾಗಗಳು ಪತ್ತೆಯಾಗಿವೆ. ತೋಟದ ವಿವಿಧ ಭಾಗಗಳಲ್ಲಿ ಪಾದ, ಕೈ, ಕಾಲು, ಮೆದುಳು ಬಿದ್ದಿರುವ ದೃಶ್ಯಗಳು ಸ್ಪೋಟದ ತೀವ್ರತೆಯನ್ನು ಸಾರಿ ಹೇಳುತ್ತಿತ್ತು.ತೋಟದೊಳಗಿದ್ದ ಘಟಕದ ಪಕ್ಕದಲ್ಲೇ ಇರುವ ಝಿಂಡೋ ಮತ್ತು ವೆಂಕಪ್ಪ-ಕಮಲಾ ದಂಪತಿಯ ಮನೆಗಳಿಗೆ ಹಾನಿಯಾಗಿದೆ. ಉಳಿದಂತೆ ಅಕ್ಕಪಕ್ಕದ ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸ್ಪೋಟಕ ತಯಾರಿಸುತ್ತಿದ್ದ ಶೆಡ್ ಸಂಪೂರ್ಣವಾಗಿ ದ್ವಂಸಗೊಂಡಿದೆ. ಸ್ಪೋಟದ ಶಬ್ಧ 4 ಕಿ.ಮೀ ದೂರಕ್ಕೆ ಕೇಳಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಫೋಟಕ್ಕೆ ಬೆಚ್ಚಿಬಿದ್ದಿರುವ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ತೋಟದೊಳಗೆ ಪತ್ತೆಯಾಗಿರುವ ಕೆಲವು ಸ್ಫೋಟಕಗಳು ಅನುಮಾನಕ್ಕೆ ಕಾರಣವಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಶಾಸಕ ಹರೀಶ್ ಪೂಂಜ, ಸಂಸದ ನಳಿನ್ ಕುಮಾರ್, ಎನ್ ಐ ಎ ತನಿಖೆಗೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಎಸ್ ಪಿ ರಿಷ್ಯಂತ್, ತಹಶೀಲ್ದಾರ್ ಪೃಥ್ವಿ ಸಾನಿಕಂ ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
ಘಟನೆಗೆ ಸಂಬಂಧಿಸಿದಂತೆ ಶಾಂತಿ ಎಂಬವರು ನೀಡಿದ ದೂರಿನ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಘಟಕದ ಮಾಲೀಕ ಬಶೀರ್ ಎಂಬಾತನ ಮೇಲೆ ಕೇಸು ದಾಖಲಾಗಿದೆ. ಘಟನೆಯ ಬಳಿಕ ಬಶೀರ್ ವೇಣೂರಿನಿಂದ ಪರಾರಿಯಾಗಿದ್ದು ಖಚಿತ ಮಾಹಿತಿ ಮೇರೆಗೆ ಸುಳ್ಯದಲ್ಲಿ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.