ಮಂಗಳೂರು(ಬೆಳ್ತಂಗಡಿ): ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಸುಡುಮದ್ದು ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟದ ಹಿನ್ನಲೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚೆನ್ನಣ್ಣನವರ್ ಜ.29ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಡಿಐಜಿ ರವಿ ಡಿ. ಚೆನ್ನಣ್ಣನವರ್ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಪರಿಶೀಲನೆ ನಡೆಸಿ ಮಾತನಾಡಿಸಿದ ಅವರು, ಈಗಾಗಲೆ ದಕ್ಷಿಣ ಕನ್ನಡ ಎಸ್ಪಿ ವರಿಷ್ಠಾಧಿಕಾರಿ ಸಹಿತ ವಿಶೇಷ ತಂಡ ಘಟನೆಯ ಕುರಿತಂತೆ ತನಿಖೆ ನಡೆಸುತ್ತಿದೆ. ಯಾವುದೇ ಸುರಕ್ಷತೆ ಇಲ್ಲದ ಸುಡುಮದ್ದು ತಯಾರಿಸುವ ಘಟಕಕ್ಕೆ ಅನುಮತಿ ನಿರಾಕರಿಸುವಂತೆ ಮತ್ತು ಬೇರೆ ಕಡೆ ಇರುವ ಸುಡುಮದ್ದು ತಯಾರಿಕಾ ಘಟಕದ ಕುರಿತು ಮುನ್ನೆಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಐಜಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ.
ಇನ್ನೊಂದೆಡೆ ದ.ಕ ಪ್ರಬಾರ ಜಿಲ್ಲಾಧಿಕಾರಿ ಡಾ.ಆನಂದ್ ಕೆ ದಕ್ಷಿಣ ಕನ್ನಡದ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ನಿರ್ಭಂದಿಸಿ ಅಮಾನತ್ತಿನಲ್ಲಿಡಲು ಆದೇಶ ಹೊರಡಿಸಿದ್ದಾರೆ. ಸುಪ್ರಿಂ ಕೋರ್ಟಿನ ಆದೇಶ, ಸರಕಾರದ ಮಾರ್ಗಸೂಚಿ ಪಾಲನೆಯ ಮರುಪರಿಶೀಲನೆಗಾಗಿ, ಪಟಾಕಿ ತಯಾರಿಕಾ ಮತ್ತು ಮಾರಾಟ ಘಟಕಗಳ ಮರುಪರಿಶೀಲನೆಗೆ ಜಿಲ್ಲಾ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದ್ದು, ಮಂಗಳೂರು ಮತ್ತು ಪುತ್ತೂರು ವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಈ ಸಮಿತಿ ಜಲ್ಲಾ ವ್ಯಾಪ್ತಿಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳನ್ನು ತಕ್ಷಣದಿಂದ ಮುಂದಿನ ಆದೇಶದ ವರೆಗೆ ಬಂದ್ ಮಾಡಲು ಆದೇಶ ಮಾಡಿದೆ. ಸ್ಪೋಟಕ ಅಧಿನಿಯಮ ಮತ್ತು ಸರಕಾರದ ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ಮಾಡಿ ಫೆ.5ರೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.