ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಮೋದ್ ಮಧ್ವರಾಜ್ ಗೆ ಬಿಜೆಪಿಯಿಂದ ಟಿಕೆಟ್‌ ನೀಡುವಂತೆ ಮೀನುಗಾರ ಸಂಘಟನೆಯಿಂದ ಹಕ್ಕೊತ್ತಾಯ

ಮಂಗಳೂರು: ಮುಂದಿನ 2024-29ರ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ  ಹಿಂದುಳಿದ ವರ್ಗದ ಮೀನುಗಾರ ಸಮಾಜದ ಪ್ರಮೋದ್ ಮಧ್ವರಾಜ್‌ ಅವರನ್ನು ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಅಖಿಲ ಭಾರತ ಮೀನುಗಾರರ ಸಂಘದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

2019ರ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಒಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂಬುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜ್ಯದ ಜನಸಂಖ್ಯೆಯು 50%ರಷ್ಟಿದ್ದರೂ ಬಿಜೆಪಿ ಒಬಿಸಿ ಅಭ್ಯರ್ಥಿಗಳಿಗೆ ಒಂದೇ ಒಂದು ಸೀಟು ನೀಡಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿರುವ ಹಿಂದುಳಿದ ವರ್ಗಕ್ಕೆ ಸೇರಿದ ಮೀನುಗಾರರು ಸವಾಲುಗಳನ್ನು ಎದುರಿಸುತ್ತಿದ್ದು, ರಾಜಕೀಯ ವೇದಿಕೆಗಳಲ್ಲಿ ಮನ್ನಣೆ ಹಾಗೂ ಪ್ರಾತಿನಿಧ್ಯವನ್ನು ಪಡೆಯಲು ದೀರ್ಘ ಕಾಲ ಹೋರಾಡುತ್ತಿದ್ದಾರೆ. ಬಹಳ ಸಮಯದಿಂದ ನಮ್ಮನ್ನು ನಿರ್ಲಕ್ಷಿಸಲಾಗಿದ್ದು ನಮ್ಮ ಸವಾಲುಗಳನ್ನು ಅರ್ಥಮಾಡಿಕೊಳ್ಳುವ, ರಾಜಕೀಯ ವೇದಿಕೆಗಳಲ್ಲಿ ನಮ್ಮ ಸದುದ್ದೇಶವನ್ನು ಸಮರ್ಥಿಸುವ, ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಮೀನುಗಾರರ ಪ್ರತಿನಿಧಿಯನ್ನು ಹೊಂದುವುದು ಬಹಳ ಮುಖ್ಯವಾಗಿದೆ. ಪ್ರಮೋದ್ ಮಧ್ವರಾಜ್‌ ರಾಜಕೀಯ ಹಿನ್ನೆಲೆಯಿಂದ ಬಂದಿರುವ ವ್ಯಕ್ತಿಯಾಗಿದ್ದು, 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ, 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಭ್ರಷ್ಟಾಚಾರ, ಕಳಂಕ ರಹಿತ ಪರಿಶುದ್ಧ ರಾಜಕಾರಣಿಯಾಗಿ ಅವರು ಮಾಡಿದ ಕಾರ್ಯಕ್ಕೆ 2018ರ ಅವಧಿಯಲ್ಲಿ ರಾಜ್ಯದ
224 ಶಾಸಕರ ಪೈಕಿ ನಂ. 1 ಶಾಸಕರಾಗಿ ವಿಶ್ವ ದರ್ಜೆಯ ಶ್ರೇಷ್ಠ ಮಾಧ್ಯಮ ಸಮೂಹ ಟೈಮ್ಸ್ ಗ್ರೂಪ್ ಸಮೀಕ್ಷೆಯಲ್ಲಿ
ಗುರುತಿಸಲ್ಪಟ್ಟಿರುವುದು ಪ್ರಮೋದ್ ಮಧ್ವರಾಜ್‌ ಹೆಗ್ಗಳಿಕೆಯಾಗಿರುತ್ತದೆ.  ಕಳೆದ ಅನೇಕ ವರ್ಷಗಳಿಂದ ತಮಿಳುನಾಡು ಕನ್ಯಾಕುಮಾರಿಯ ಮೀನುಗಾರರು ರಾಜ್ಯದ ಬೋಟುಗಳ ಮೀನು ಮತ್ತು ಸಾಮಾಗ್ರಿಗಳನ್ನು ದೋಚಿ ಮಾರಣಾಂತಿಕ ಹಲ್ಲೆ ಮಾಡಿದ ಬಗ್ಗೆ ಮೀನುಗಾರರಿಗೆ ಈ ತನಕವೂ ನ್ಯಾಯ ದೊರಕದೇ ಇದ್ದು ಈ ಸಮಸ್ಯೆಯನ್ನು ಪ್ರಮೋದ್ ಮಧ್ವರಾಜ್ ಅವರು ಶೀಘ್ರ ಪರಿಹರಿಸುವ ವಿಶ್ವಾಸವಿದೆ. ಅಂತರ್‌ ರಾಜ್ಯ ಮೀನುಗಾರರಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು  ಸಮನ್ವಯ ಸಮಿತಿಯನ್ನು ರಚಿಸುವುದು, ಮೀನುಗಾರಿಕೆಯನ್ನು ಆಧುನೀಕರಣಗೊಳಿಸಿ ಅಭಿವೃದ್ಧಿಪಡಿಸುವುದು, ರಾಜ್ಯದ ಕಡಲ ಕಿನಾರೆ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಆಕರ್ಷಣೀಯ ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸುವುದು, ಮಾಹಿತಿ ತಂತ್ರಜ್ಞಾನ ಕೇಂದ್ರ ನಿರ್ಮಾಣ ಮಾಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ವಿಶ್ವಾಸವಿರುವ ಕಾರಣ ಇಡೀ ಮೀನುಗಾರ ಸಮಾಜ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಅಖಿಲ ಭಾರತ ಮೀನುಗಾರರ ಸಂಘದ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೋಹನ್ ಬೆಂಗ್ರೆ, ಕಿಶೋರ್ ಸುವರ್ಣ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here