ಮಂಗಳೂರು(ಬೆಂಗಳೂರು): ‘ಟೈಲರ್‌ಗಳ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಟೈಲರ್‌ಗಳ ಕ್ಷೇಮನಿಧಿ ಮಂಡಳಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಜ.30ರಂದು ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ನ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶ್ರಮಿಕ ವರ್ಗ ಈ ನಾಡಿನ ಆಸ್ತಿ. ಅಸಂಘಟಿತ ಕಾರ್ಮಿಕರಾಗಿರುವ ಟೈಲರ್‌ಗಳ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕೇರಳದಲ್ಲಿ ಟೈಲರ್‌ಗಳ ಕ್ಷೇಮನಿಧಿ ಮಂಡಳಿಯಿದೆ. ಅದೇ ಮಾದರಿಯಲ್ಲಿ ಮಂಡಳಿ ಸ್ಥಾಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಲಾಗುವುದು ಎಂದರು. ‘ಸಮಾಜದ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು ಎಂಬುದು ಸಂವಿಧಾನದ ಆಶಯ. 75 ವರ್ಷ ಕಳೆದರೂ ಟೈಲರ್‌ಗಳಿಗೆ ಸೇವಾ ಭದ್ರತೆ ಇಲ್ಲವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅವರಿಗೆ ನ್ಯಾಯ ಕಲ್ಪಿಸುತ್ತೇವೆ’ ಎಂದು ಹೇಳಿದರು.‘ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಶ್ರೀರಾಮನ ಭಕ್ತರಾಗಿದ್ದರು. ಅವರು ಈ ದೇಶಕಂಡ ಶ್ರೇಷ್ಠ ಹಿಂದೂ. ಮಹಾತ್ಮ ಗಾಂಧಿ ಅವರನ್ನು ಮತಾಂಧ ನಾಥೂರಾಂ ಗೋಡ್ಸೆ ಕೊಂದು ಹಾಕಿದ್ದ. ಹಂತಕ ಗೋಡ್ಸೆ ಬೆಂಬಲಕ್ಕೆ ನಿಂತಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಸಮಾಜ ವಿರೋಧಿಗಳು’ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ‘ಹೊಲಿಗೆ ವೃತ್ತಿ ಮೂಲಕ ಎಲ್ಲರ ಮಾನ ಕಾಪಾಡುತ್ತಿರುವ ಟೈಲರ್‌ಗಳ ಗೌರವ ಕಾಪಾಡುವುದು ಸರ್ಕಾರದ ಕರ್ತವ್ಯ. ಶ್ರೇಷ್ಠ ವೃತ್ತಿಗಳಲ್ಲಿ ಈ ವೃತ್ತಿಯೂ ಒಂದು. ಈ ವೃತ್ತಿ ಅವಲಂಭಿಸಿರುವ ಜನರಿಗೆ ವೈದ್ಯಕೀಯ ಸೌಲಭ್ಯಗಳು, ಪಿಂಚಣಿ ಯೋಜನೆ, ಮಕ್ಕಳ ಶಿಕ್ಷಣಕ್ಕೆ ನೆರವು ದೊರೆಯಬೇಕು. ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುತ್ತೇನೆ. ವಿಧಾನಸಭೆ ಅಧಿವೇಶನದಲ್ಲಿ ಟೈಲರ್‌ಗಳ ಸಮಸ್ಯೆಗಳ ಕುರಿತು ಚರ್ಚಿಸಲು ಹೆಚ್ಚಿನ ಸಮಯ ಕಲ್ಪಿಸುತ್ತೇನೆ’ ಎಂದು ಭರವಸೆ ನೀಡಿದರು. ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಟೈಲರಿಂಗ್ ಅತ್ಯಂತ ಕಷ್ಟಕರವಾದ ವೃತ್ತಿ. ಟೈಲರ್ ವೃತ್ತಿ ಎಷ್ಟೇ ಯಾಂತ್ರೀಕರಣ ಆಗಿದ್ದರೂ ಕೆಲಸದ ವೇಳೆ ಕೈ–ಕಾಲುಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ಹೇಳಿದರು. ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ಖರೀದಿ, ಮನೆ ನಿರ್ಮಾಣ ಹಾಗೂ ಮನೆ ದುರಸ್ತಿಗೆ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು, ಆರೋಗ್ಯ ವಿಮೆ, ಹೆಣ್ಣು ಮಕ್ಕಳ ವಿವಾಹ ಹಾಗೂ ಹೆರಿಗೆ ಭತ್ಯೆ ಯೋಜನೆ ಜಾರಿಗೊಳಿಸುವಂತೆ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಸರಕಾರಕ್ಕೆ ಮನವಿ ಸಲ್ಲಿಸಿದೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್, ಅಸೋಸಿಯೇಷನ್ ಅಧ್ಯಕ್ಷ ಬಿ.ಎ.ನಾರಾಯಣ್, ಖಜಾಂಚಿ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಅಸೋಸಿಯೇಷನ್ ಸ್ಥಾಪಕ ಸದಸ್ಯ ಬಿ.ವಸಂತ್ ಹಾಜರಿದ್ದರು.