ಮಂಗಳೂರು(ಇಸ್ಲಾಮಾಬಾದ್): ತೋಷಖಾನಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಅವರಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ.
ದೇಶದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.30ರಂದು ಇಮ್ರಾನ್ ಮತ್ತು ಇತರರಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಇದರ ಬೆನ್ನಲ್ಲೇ ಇಂದು(ಜ.31) ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದರಿಂದ ಫೆಬ್ರುವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಇಮ್ರಾನ್ ಖಾನ್ ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ.
ಅಕ್ಕೊ–ಯು–ಎಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶ ಮೊಹಮ್ಮದ್ ಬಶೀರ್, ಇಮ್ರಾನ್ ಖಾನ್ ಅವರನ್ನು ಇರಿಸಲಾಗಿರುವ ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲೇ ಪ್ರಕರಣದ ವಿಚಾರಣೆ ನಡೆಸಿದರು. ಇಬ್ಬರಿಗೂ 10 ವರ್ಷಗಳ ಕಾಲ ಯಾವುದೇ ಸರ್ಕಾರಿ ಹುದ್ದೆ ಹೊಂದದಂತೆ ನಿರ್ಬಂಧ ಹೇರಲಾಗಿದ್ದು, ತಲಾ ₹787 ಮಿಲಿಯನ್ ದಂಡ ವಿಧಿಸಲಾಗಿದೆ. ಪ್ರಕರಣದ ತೀರ್ಪಿನ ಸಂದರ್ಭ ಇಮ್ರಾನ್ ಪತ್ನಿ ಬುಶ್ರಾ ಅವರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ. ತೋಷಖಾನಾಗೆ ಬಂದ ಉಡುಗೊರೆಗಳ ಮಾಹಿತಿ ಬಹಿರಂಗಪಡಿಸದಿರುವುದು ಮತ್ತು ಕೆಲ ಉಡುಗೊರೆಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಆರೋಪ ಇಮ್ರಾನ್ ಖಾನ್ ಮೇಲಿತ್ತು.