ಮಂಗಳೂರು(ನವದೆಹಲಿ): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಲೋಕಸಭೆಯಲ್ಲಿ 2024–25ನೇ ಹಣಕಾಸು ವರ್ಷದ ಕೇಂದ್ರದ ಮಧ್ಯಂತರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಬಜೆಟ್ ಮಂಡನೆಯ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 25 ಕೋಟಿ ಜನರು ಬಹುಆಯಾಮದ ಬಡತನದಿಂದ ಮುಕ್ತಿ ಪಡೆದಿದ್ದಾರೆ ಎಂದು ಅವರು ಉಲ್ಲೇಖ ಮಾಡಿದ್ದಾರೆ.80 ಕೋಟಿ ಜನರಿಗೆ ಉಚಿತ ರೇಷನ್ ನೀಡುವ ಮೂಲಕ ಆಹಾರದ ಕಳವಳ ನಿವಾರಣೆಯಾಗಿದೆ ಎಂದು ಅವರು ಹೇಳಿದ್ದಾರೆ. ಅನ್ನದಾತರಿಗೆ (ರೈತರು) ಕನಿಷ್ಠ ಬೆಂಬಲ ಬೆಲೆಯನ್ನು ಅಗತ್ಯಕ್ಕೆ ತಕ್ಕಂತೆ ನಿರಂತರವಾಗಿ ವೃದ್ಧಿಸಲಾಗಿದೆ. 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಈ ಎಲ್ಲ ಸವಾಲುಗಳನ್ನು ಸರ್ಕಾರವು ಸಮರ್ಥವಾಗಿ ನಿಭಾಯಿಸಿದೆ ಎಂದು ಹೇಳಿದ್ದಾರೆ.
ಬಜೆಟ್ ಮುಖ್ಯಾಂಶಗಳು ಇಂತಿದೆ.
- ಬಾಡಿಗೆ, ಸ್ಲಂ ಅಥವಾ ಅನಧಿಕೃತ ಕಾಲನಿಗಳಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದವರಿಗೆ ಮನೆ ಕಟ್ಟಲು ಅಥವಾ ಖರೀದಿಸಲು ನೆರವು
- ಜನಸಂಖ್ಯೆ ವಿಪರೀತ ಏರಿಕೆಯಿಂದ ಸಂಭವನೀಯ ಸವಾಲುಗಳ ನಿರ್ವಹಣೆಗೆ ಉನ್ನತ ಮಟ್ಟದ ಸಮಿತಿ ರಚನೆಗೆ ಒತ್ತು.
- ಪ್ರವಾಸಿ ತಾಣಗಳ ಅಭಿವೃದ್ಧಿಗೆ ರಾಜ್ಯಗಳಿಗೆ ಉತ್ತೇಜನ
- ದ್ವೀಪ ಪ್ರದೇಶಗಳಲ್ಲಿ ಬಂದರು ಸಂಪರ್ಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ
- ಮೂರು ಪ್ರಮುಖ ಆರ್ಥಿಕ ಕಾರಿಡಾರ್ ಅನುಷ್ಠಾನ
- ಖನಿಜ ಶಕ್ತಿ ಮತ್ತು ಸಿಮೆಂಟ್ ಕಾರಿಡಾರ್
- ಅಧಿಕ ಸಂಚಾರ ಸಾಂದ್ರತೆಯ ಕಾರಿಡಾರ್
- ಬಹು ಮಾದರಿ ಸಂಪರ್ಕ ಸಾಧ್ಯವಾಗಿಸುವ ಪಿಎಂ ಗತಿ ಶಕ್ತಿ ಕಾರಿಡಾರ್
- ಆಯುಷ್ಮಾನ್ ಭಾರತ ಯೋಜನೆಯನ್ನು ವಿಸ್ತರಿಸಲಾಗುವುದು. ಈ ಯೋಜನೆ ಇನ್ನುಮುಂದೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೂ ಅನ್ವಯವಾಗಲಿದೆ.
- ತೆರಿಗೆ ದರಗಳಲ್ಲಿ ಯಥಾಸ್ಥಿತಿ
- ₹ 7 ಲಕ್ಷದ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಹೊರೆ ಇಲ್ಲ
- ಕಳೆದ 10 ವರ್ಷಗಳಲ್ಲಿ ತೆರಿಗೆ ಸಂಗ್ರಹ ದುಪ್ಪಟ್ಟು
- ಸುಸ್ಥಿರ ಅಭಿವೃದ್ಧಿ ಮತ್ತು ಉತ್ಪಾದಕತೆ ಹೆಚ್ಚಿಸುವ ಆರ್ಥಿಕತೆಯನ್ನು ಸರ್ಕಾರ ಅಳವಡಿಸಿಕೊಳ್ಳಲಿದೆ.
ನೇರ ತೆರಿಗೆಗೆ ಸಂಬಂಧಿಸಿದ 1962ರಷ್ಟು ಹಳೆಯ ಹಲವು ವಿವಾದಗಳು ದಾಖಲೆಗಳಲ್ಲೇ ಉಳಿದಿವೆ. 2009 ರವರೆಗಿನ ₹ 25,000ಕ್ಕಿಂತ ಕಡಿಮೆ ಮೊತ್ತದ ವಿವಾದಗಳನ್ನು ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ. - 2027ಕ್ಕೆ ವಿಕಸಿತ ಭಾರತ
- ಎಲ್ಲರ ಸಮಗ್ರ ಅಭಿವೃದ್ಧಿ
- ‘ಪ್ರತಿಯೊಬ್ಬರ ಪ್ರಯತ್ನ’ ಚಿಂತನೆಯಲ್ಲಿ 3ಡಿ (ಡೆಮಾಗ್ರಫಿ, ಡೆಮಾಕ್ರಸಿ, ಡೈವರ್ಸಿಟಿ) ಅಭಿವೃದ್ಧಿ.
59 ನಿಮಿಷ 15 ಸೆಕೆಂಡ್ಗಳಲ್ಲಿ ಬಜೆಟ್ ಭಾಷಣ ಮುಕ್ತಾಯ. ಹಣಕಾಸು ಮಸೂದೆ–2024 ಅನ್ನು ಲೋಕಸಭೆ ಅಂಗೀಕರಿಸಿದೆ. ಬಜೆಟ್ ಅಧಿವೇಶನವನ್ನು ನಾಳೆಗೆ (ಫೆಬ್ರುವರಿ 2ಕ್ಕೆ) ಮುಂದೂಡಲಾಗಿದೆ.