ಮುಳುಗಿದ ಟ್ರಾಲ್ ಬೋಟ್- ಆರು ಮಂದಿ ಮೀನುಗಾರರ ರಕ್ಷಣೆ

ಮಂಗಳೂರು(ಉಳ್ಳಾಲ): ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ಹಿಂದಿರುಗುತ್ತಿದ್ದ ಟ್ರಾಲ್ ಬೋಟೊಂದು ಸಮುದ್ರದಲ್ಲಿ ಕಲ್ಲೊಂದಕ್ಕೆ ಢಿಕ್ಕಿ ಹೊಡೆದು ಮುಳುಗಿದ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಬೋಟ್ ನಲ್ಲಿದ್ದ ಆರು ಮಂದಿಯನ್ನು ಇತರ ಎರಡು ಬೋಟ್ ನವರು ರಕ್ಷಿಸಿದ್ದಾರೆ.

ದುರಂತಕ್ಕೀಡಾಗಿರುವ ಬೋಟ್ ಉಳ್ಳಾಲದ ನಯನಾ ಪಿ. ಸುವರ್ಣ ಎಂಬವರಿಗೆ ಸೇರಿದ್ದು ನಯನಾರ ಪತಿ, ಬೋಟ್ ಚಲಾಯಿಸುತ್ತಿದ್ದ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹಾದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ ಮತ್ತು ವಾಸು ಎಂಬವರು ರಕ್ಷಿಸಲಾಗಿದೆ. ಪ್ರವೀಣ್ ಸುವರ್ಣ ಹಾಗೂ ಐವರು ಮೀನುಗಾರರು ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಉಳ್ಳಾಲ ಸಮುದ್ರ ತೀರದ ಮೂಲಕ ದಡಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಬೋಟ್ ನ ಪ್ರೊಫೆಲ್ಲರ್ ಗೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಅದು ಸ್ಥಗಿತಗೊಂಡಿದೆ. ಬೋಟ್ ಸಮುದ್ರದ ತೆರೆಗಳ ಅಬ್ಬರಕ್ಕೆ ಸಿಲುಕಿ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇ ಕಲ್ಲಿಗೆ ಬಡಿದಿದೆ. ಇದರಿಂದ ಹಾನಿಗೊಳಗಾದ ಬೋಟ್ ಮುಳುಗಿದೆ ಎಂದು ತಿಳಿದುಬಂದಿದೆ. ಟ್ರಾಲ್ ಬೋಟ್ ಮುಳುಗುತ್ತಿರುವ ವಿಚಾರ ತಿಳಿದ ಮೀನುಗಾರಿಕೆಗೆ ತೆರಳಿದ್ದ ದುರ್ಗಾಲಕ್ಷ್ಮೀ ಮತ್ತು ಶ್ರೀ ಗೌರಿ ಬೋಟ್ ಹಾಗೂ ನಾಡದೋಣಿಯಲ್ಲಿದ್ದ ಮೀನುಗಾರರು ಬೋಟ್‌ ನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಮುಳುಗಿದ ಬೋಟನ್ನು ಅಶ್ವಿನ್ ಕೋಟ್ಯಾನ್ ಮಾಲಕತ್ವದ ಜೈ ಮಾರುತಿ ಸ್ಪೀಡ್ ಬೋಟ್ ಮೂಲಕ ಹಳೆ ಬಂದರು ದಕ್ಕೆಗೆ ಎಳೆದು ತರಲಾಗಿದೆ. ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

LEAVE A REPLY

Please enter your comment!
Please enter your name here