ಮಂಗಳೂರು(ಬೆಂಗಳೂರು): ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳಿಕೊಂಡು ಜಿಲ್ಲಾ ಪಂಚಾಯಿತ್ ಟಿಕೆಟ್ ಕೊಡಿಸುವುದಾಗಿ ತನ್ನಿಂದ 2 ಲಕ್ಷ ರೂ. ಪಡೆದುಕೊಂಡು ವಂಚಿಸಿರುವುದಾಗಿ ಚಂದನ್ ಕುಮಾರ್ ಗೌಡ ಎಂಬುವವರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ ಪ್ರತಾಪ್ ತನ್ನಿಂದ 2 ಲಕ್ಷ ರೂ. ಪಡೆದುಕೊಂಡಿದ್ದಾರೆ. ತನಗೆ ಹೆಚ್.ಡಿ. ಕುಮಾರಸ್ವಾಮಿ ಅವರ ಪರಿಚಯವಿದೆ. ಆಗಾಗ ನಾನು ಅವರ ಫಾರ್ಮ್ ಹೌಸ್ ಗೆ ಭೇಟಿ ನೀಡುತ್ತೇನೆ ಎಂದಿದ್ದಾನೆ. ಬಿಗ್ ಬಾಸ್ ಮನೆಯಲ್ಲಿರುವ ವೇಳೆ ಪ್ರಚಾರಬೇಕೆಂದು ನನ್ನಿಂದ ಸಹಾಯ ಕೇಳಿದ್ದಾನೆ. ನಾನು ನನ್ನಿಂದಾಗುವಷ್ಟು ಸಹಾಯವನ್ನು ಮಾಡಿದ್ದು, ಅವನ ಪರವಾಗಿ ಪ್ರಚಾರವನ್ನು ಕೂಡ ಮಾಡಿದ್ದೇನೆ. ಬಿಗ್ ಬಾಸ್ ರನ್ನರ್ ಅಪ್ ಆದ ಬಳಿಕ ಪ್ರತಾಪ್ ನನ್ನ ಕರೆ ಹಾಗೂ ಮೆಸೇಜ್ ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ತನಗೆ ಆಗಿರುವ ಮೋಸಕ್ಕೆ ನ್ಯಾಯ ಒದಗಿಸಬೇಕೆಂದು ಚಂದನ್ ದೂರಿನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಚಂದನ್ ಕುಮಾರ್ ರೊಂದಿಗೆ ಪ್ರತಾಪ್ ಮಾತನಾಡಿರುವ ಎನ್ನಲಾದ ಆಡಿಯೋವನ್ನು ಕೂಡ ರಿಲೀಸ್ ಮಾಡಲಾಗಿದೆ.