ಮಂಗಳೂರು(ಶಿಮ್ಲಾ): ಹಿಮಾಚಲಪ್ರದೇಶದ ಸೋಲನ್ ನ ಬಡ್ಡಿ ಕೈಗಾರಿಕಾ ಪ್ರದೇಶದಲ್ಲಿ ಸುಗಂಧ ದ್ರವ್ಯದ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಸುಗಂಧ ದ್ರವ್ಯದ ಕಾರ್ಖಾನೆಯಲ್ಲಿ ಫೆ.2ರ ಸಂಜೆ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿತ್ತು. ಈ ಬೆಂಕಿ ಅವಘಡದಲ್ಲಿ ಇದುವರೆಗೆ 9 ಮಂದಿ ನಾಪತ್ತೆಯಾಗಿದ್ದಾರೆ. 31 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಚಂಡೀಗಡದ ಪಿಜಿಐಎಂಇಆರ್ ನಲ್ಲಿ ದಾಖಲಿಸಲಾಗಿದ್ದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅನಂತರ ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸೋಲನ್ ಮನಮೋಹನ್ ಶರ್ಮಾ ತಿಳಿಸಿದ್ದಾರೆ. ಸುಗಂಧ ದ್ರವ್ಯ ಉತ್ಪಾದನೆಗೆ ಬಳಸಲಾಗುವ ದಹನಶೀಲ ವಸ್ತುಗಳು ಹಾಗೂ ಇತರ ಪ್ರಸಾಧನ ಸಾಮಗ್ರಿಗಳಿಗೆ ಬೆಂಕಿ ಹತ್ತಿಕೊಂಡಿರುವುದರಿಂದ ಬೆಂಕಿ ನಂದಿಸಲು ಕಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.