ಚಿಲಿಯಲ್ಲಿ ಭಾರೀ ಕಾಡ್ಗಿಚ್ಚು-ಜನನಿಬಿಡ ಪ್ರದೇಶಗಳಿಗೂ ವ್ಯಾಪಿಸಿದ ಬೆಂಕಿ-46 ಜನರ ಸಾವು-ಸುಟ್ಟುಕರಕಲಾದ ಮನೆ, ವಾಹನಗಳು

ಮಂಗಳೂರು(ವಿನಾ ಡೆಲ್ ಮಾರ್): ಚಿಲಿಯಲ್ಲಿ ದಿನೇ ದಿನೇ ಏರುತ್ತಿರುವ ತಾಪಮಾನದಿಂದಾಗಿ ಕಾಡ್ಗಿಚ್ಚು ಉಂಟಾಗಿದೆ. ಬೆಂಕಿ ನಿರಂತರವಾಗಿ ಹಬ್ಬುತ್ತಿದ್ದು ಈವರೆಗೆ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರಿಗೆ ಗಾಯಗಳಾಗಿವೆ. ಕೆಲವರ ಪರಿಸ್ಥಿತಿ ಗಂಭೀರವಾಗಿದೆ. ಸುಮಾರು 1,100 ಮನೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಚಿಲಿ ಅಧ್ಯಕ್ಷ ಬೋರಿಕ್ ಗೇಬ್ರಿಯಲ್ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ದೂರದರ್ಶನದಲ್ಲಿ ಮಾತನಾಡಿದ ಅವರು, “ವಾಲ್ಪಾರೈಸೊ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಬೆಂಕಿಯ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ. ತುರ್ತು ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ. ಅಗ್ನಿಶಾಮಕ ದಳದವರು ಯುದ್ಧೋಪಾದಿಯಲ್ಲಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಜನರು ಸಹಕರಿಸಬೇಕು. ಬೆಂಕಿ ಅತ್ಯಂತ ವೇಗವಾಗಿ ಹರಡುತ್ತಿದೆ. ಹವಾಮಾನ ವೈಪರೀತ್ಯದಿಂದ ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿಲ್ಲ” ಎಂದು ಅವರು ತಿಳಿಸಿದ್ದಾರೆ.

ವಾಲ್ಪಾರಾಸೊ ಪ್ರದೇಶದಲ್ಲಿ ಬೆಂಕಿಯ ಆರ್ಭಟ ತೀವ್ರವಾಗಿದೆ. ಅಲ್ಲಿರುವ ಅಧಿಕಾರಿಗಳು, ಮನೆಗಳಲ್ಲಿದ್ದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಒತ್ತಾಯಿಸಿದ್ದಾರೆ. ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳು ಮತ್ತು ಇತರ ತುರ್ತು ವಾಹನಗಳು ರಸ್ತೆಗಳಲ್ಲಿ ಬೀಡುಬಿಟ್ಟಿವೆ. ಜನರ ಸುರಕ್ಷತೆಯ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಶುಕ್ರವಾರದಿಂದ ಕ್ವಿಲ್ಪು ಮತ್ತು ವಿಲ್ಲಾ ಅಲೆಮಾನಾ ಪಟ್ಟಣಗಳ ಬಳಿ ಕಾಡ್ಗಿಚ್ಚಿನಿಂದ ಕನಿಷ್ಠ 8,000 ಹೆಕ್ಟೇರ್ (19,770 ಎಕರೆ) ಸುಟ್ಟುಹೋಗಿದೆ. ಕರಾವಳಿಯ ರೆಸಾರ್ಟ್ ಪಟ್ಟಣವಾದ ವಯಾ ಡೆಲ್ ಮಾರ್​ನತ್ತ ಬೆಂಕಿ ಹಬ್ಬುತ್ತಿದೆ. ಅಲ್ಲಿನ ಕೆಲವು ಪ್ರದೇಶಗಳನ್ನು ಈಗಾಗಲೇ ಬೆಂಕಿ ಆವರಿಸಿಕೊಂಡಿದೆ. ವಿಲ್ಲಾ ಇಂಡಿಪೆಂಡೆನ್ಸಿಯಾದಲ್ಲಿ ಪಟ್ಟಣದ ಪೂರ್ವ ಅಂಚಿನಲ್ಲಿರುವ ಬೆಟ್ಟ ಹಾಗೂ ಹಲವಾರು ಮನೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಹಲವು ಕಾರುಗಳು ಸುಟ್ಟು ಕರಕಲಾಗಿವೆ.

LEAVE A REPLY

Please enter your comment!
Please enter your name here