ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪದ್ಮನಾಭ ನರಿಂಗಾನ ನಿಧನರಾಗಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಪದ್ಮನಾಭ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದೆ.
ಪದ್ಮನಾಭ ನರಿಂಗಾನ ಅವರು 20 ಅಂಶದ ಕಾರ್ಯಕ್ರಮದ ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ-ಎಸ್ಟಿ ಅಧ್ಯಕ್ಷರಾಗಿ, ಅಹಿಂದ ಜಿಲ್ಲಾಧ್ಯಕ್ಷರಾಗಿ, ನರಿಂಗಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿ, ಕೈರಂಗಳ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ, ಸ್ಥಳೀಯ ದೇವಸ್ಥಾನ, ದೈವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ನರಿಂಗಾನ ಕಂಬಳ ಸಮಿತಿ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಪದ್ಮನಾಭ ನರಿಂಗಾನ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. ಧಾರ್ಮಿಕ-ಸಾಮಾಜಿಕ ರಂಗಗಳಲ್ಲಿ ಸಕ್ರೀಯರಾಗಿದ್ದು, ಅಹಿಂದ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಪರಿಮಿತ ಶ್ರಮ, ಬದ್ಧತೆಯಿಂದ ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬಂದವರು. ಪ್ರಾಮಾಣಿಕ ರಾಜಕಾರಣಿಯಾಗಿ ಪಕ್ಷದಲ್ಲಿ ಗುರುತಿಸಿಕೊಂಡು ಎಲ್ಲರ ಪ್ರೀತಿ ಪಾತ್ರರಾಗಿದ್ದರು. ಅವರ ನಿಧನ ನಮಗೆಲ್ಲಾ ಆಘಾತ ಉಂಟುಮಾಡಿದ್ದು, ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ-ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸೇರಿದಂತೆ ಪಕ್ಷದ ಜಿಲ್ಲಾ ಮಂಚೂಣಿ ನಾಯಕರು ತೀವ್ರ ಸಂಪಾತ ಸೂಚಿಸಿದ್ದಾರೆ.