ಜ್ಞಾನವಾಪಿ ಪೂಜೆಗೆ ಅನುಮತಿ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ-ಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸುವಂತೆ ಒತ್ತಾಯ-ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ-ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ

ಮಂಗಳೂರು: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿರುವುದನ್ನು ಖಂಡಿಸಿರುವ ಎಸ್‌ಡಿಪಿಐ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಸಭೆ ನಡೆಯಿತು.ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪೂಜಾ ಸ್ಥಳಗಳ ಕಾಯಿದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಜ್ಞಾನವಾಪಿ ವಿಷಯದಲ್ಲಿ ಹೈಕೋರ್ಟ್ ನಲ್ಲಿ ಕೇಸು ನಡೀತಾ ಇದೆ. ಆದರೂ ತರಾತುರಿಯಲ್ಲಿ ಕೆಳಗಿನ ಕೋರ್ಟ್ ನ ಜಡ್ಜ್ ಪೂಜೆಗೆ ಅವಕಾಶ ನೀಡಿದ್ದಾರೆ. ಪೂಜಾ ಸ್ಥಳ ಕಾಯಿದೆಯಡಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ಇದೆ. ಆದರೆ ಈ ದೇಶದಲ್ಲಿ ಕಾನೂನು ಇದೆಯೇ? ಕಾನೂನು ಸತ್ತು ಹೋಗಿದೆ. ಕಾನೂನಿಗೆ ಮೂರು ಕಾಸಿನ ಬೆಲೆ ಕೊಡ್ತಾ ಇಲ್ಲ. ಸಂಘರ್ಷ, ತ್ಯಾಗ, ಬಲಿದಾನ ಮಾಡದೇ ನಮ್ಮ ಸಮಸ್ಯೆಗೆ ಪರಿಹಾರ ಇಲ್ಲ. ಯಾವ ಬೆಲೆ ತೆತ್ತಾದರೂ ಮಸೀದಿ, ಮಂದಿರ, ಚರ್ಚ್ ಗಳನ್ನು ಉಳಿಸಿಕೊಳ್ಳಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದಿದ್ದನ್ನ ಅಲ್ಲೇ ಉಳಿಸಿಕೊಳ್ಳಬೇಕು. ಸಿದ್ದರಾಮಯ್ಯ, ರಾಹುಲ್, ಸೋನಿಯಾ, ಖರ್ಗೆ ಉಳಿಸ್ತಾರೆ ಅಂತ ಕಾಯಬೇಡಿ. ಸಂಘರ್ಷಕ್ಕೆ ಮತ್ತು ಹುತಾತ್ಮರಾಗಲು ತಯಾರಾಗಿ ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ದೇಶದ ಸ್ಥಳೀಯ ಮತ್ತು ಮೇಲಿನ ನ್ಯಾಯಾಲಯಗಳ ತೀರ್ಪು ಅಂತಿಮ ಅಂದುಕೊಂಡಿದ್ದಾರೆ. ಆದರೆ ಈ ದೇಶಕ್ಕೆ ಸಂವಿಧಾನ ಸರ್ವೋಚ್ಛ. ಹೀಗಾಗಿ ನ್ಯಾಯಾಲಯಗಳು ಸಂವಿಧಾನದ ಪರವಾಗಿ ತೀರ್ಪು ನೀಡದಿದ್ದರೆ ಪ್ರಶ್ನಿಸಬೇಕು. ದ‌.ಕ ಜಿಲ್ಲೆಯಲ್ಲಿ ಸಂಘಪರಿವಾರವನ್ನು ಎದುರಿಸುವ ಜನ ಸಮೂಹ ಇದೆ. ನಾವು ಸೋತಿರಬಹುದು, ಆದರೆ ನಾವು ಸತ್ತಿಲ್ಲ. ಮೋಹನ್ ಭಾಗವತ್ ಯಾರು ನಮ್ಮ ರಾಷ್ಟ್ರಪತಿಯಾ? ನಮ್ಮ ಜೀವ ಹೋದರೂ ಪರವಾಗಿಲ್ಲ, ಹಕ್ಕಿಗಾಗಿ ನಾವು ಹೋರಾಟ ಮಾಡಬೇಕು. ಯಾವ ಕ್ಷಣದಲ್ಲಾದರೂ ನಮ್ಮ ಬಂಧನವಾಗಬಹುದು, ಆದರೆ ಹೋರಾಟದಿಂದ ಹಿಂದೆ ಸರಿಯಲ್ಲ. ಇಡಿ, ಎನ್ಐಎ ಮೂಲಕ ನೀವು ಭಯ ಪಡಿಸಿದರೂ ನಾವು ಭಯ ಪಡಲ್ಲ. ನಾವು ಕೇವಲ ಮಸೀದಿಗಳನ್ನು ಕಳೆದುಕೊಳ್ಳುತ್ತಿಲ್ಲ, ನಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಾ ಇದ್ದೇವೆ. ಈ ದೇಶದ ಮಣ್ಣಿನಲ್ಲಿ ನಮಗೆ ಹಕ್ಕಿದೆ, ನಮ್ಮ ಪೂರ್ವಿಕರ ಅಸ್ತಿತ್ವ ಇದೆ. ನಿಮ್ಮ ಮನೆಗೆ ನುಸುಳಿದ್ರೆ ನೀವು ಸುಮ್ಮನೆ ಇರ್ತೀರಾ? ಅದೇ ರೀತಿ ನಮ್ಮ ಧಾರ್ಮಿಕ ಚಿಹ್ನೆಗಳಾದ ಮಸೀದಿಗಳಿಗೆ ನುಸುಳಿದಾಗಲೂ ಪ್ರತಿರೋಧ, ವಿರೋಧ, ಆಕ್ರೋಶ ಇರಲಿ ಎಂದು ಹೇಳಿದರು.

ಜ್ಞಾನವಾಪಿ ನಮ್ಮದು ನಮ್ಮದಾಗೆ ಉಳಿಯುವುದು ಎಂಬ ಪ್ಲೇ ಕಾರ್ಡ್ ಹಿಡಿದು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ  ಭಾಗವಹಸಿದ್ದರು.

 

LEAVE A REPLY

Please enter your comment!
Please enter your name here