



ಮಂಗಳೂರು: ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿಯೊಬ್ಬರು ಅಯೋಧ್ಯಾ ರಾಮಮಂದಿರ ಮತ್ತು ಶ್ರೀರಾಮನ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದನ್ನು ಖಂಡಿಸಿ ಮಂಗಳೂರಿನಲ್ಲಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ.







ಶಾಲಾ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬುವರು ಶ್ರೀ ರಾಮ ದೇವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಲಾಗಿದೆ. ಈ ಕುರಿತು ಪೋಷಕರೊಬ್ಬರು ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ. ಶಿಕ್ಷಕಿ ಶಾಲಾ ಮಕ್ಕಳಿಗೆ ಹಿಂದೂ ಧರ್ಮ, ದೇವರ ಬಗ್ಗೆ ಅವಹೇಳನಕಾರಿ ಬೋಧನೆ ಮಾಡಿದ್ದಾರೆ. ಮಕ್ಕಳಲ್ಲಿ ಧರ್ಮ ವಿರೋಧಿ ಚಿಂತನೆಯನ್ನು ಬಿತ್ತುತ್ತಿದ್ದಾರೆ. ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಕ್ತ ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಸಂಯೋಜಕ್ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ.




ಈ ವಿಚಾರವಾಗಿ ಶಾಲೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ನಡೆಸಿ ವಾಪಾಸ್ ಆಗುವ ವೇಳೆ ಐವನ್ ಡಿಸೋಜಾ ಅವರ ಕಾರನ್ನು ತಡೆದ ಪೋಷಕರು ಮತ್ತು ಹಿಂದೂ ಕಾರ್ಯಕರ್ತರು ವಾಗ್ವಾದ ನಡೆಸಿ ಶಿಕ್ಷಕಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭ ತಡೆಯಲು ಬಂದ ಪೊಲೀಸರ ವಿರುದ್ದವೂ ಕಾರ್ಯಕರ್ತರು ಅಸಮಾಧಾನ ಹೊರಹಾಕಿದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.













