ಮಂಗಳೂರು: ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪಾಠ ಮಾಡಿದ ಶಿಕ್ಷಕಿ ವಿರುದ್ದ ಕ್ರಮ ಕೈಗೊಳ್ಳುವಂತೆ ಬಿಜೆಪಿ ಶಾಸಕರು ಮತ್ತು ಹಿಂದೂ ಪರ ಸಂಘಟನೆಗಳ ಮುಖಂಡರು ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಒತ್ತಾಯಿಸಿದ್ದಾರೆ.
ರಾಮನ ಬಗ್ಗೆ ಮಾತನಾಡಲು ಇವರು ಯಾರು? ಇವರು ಪಾಠ ಮಾಡಲಿ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಾಸಕರಾದ ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿದ್ಯಾರ್ಥಿಗಳ ಪೋಷಕರು, ಹಿಂದೂ ಕಾರ್ಯಕರ್ತರು, ಮುಖಂಡರು ಶಿಕ್ಷಕಿಯನ್ನು ವಜಾ ಮಾಡಬೇಕು, ಪ್ರಕರಣ ದಾಖಲಿಸಬೇಕೆಂದು ಡಿಡಿಪಿಐಗೆ ಆಗ್ರಹಿಸಿದ್ದಾರೆ. ಶಾಲೆಗೆ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದು, ಅವರು ನೀಡುವ ವರದಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಡಿಪಿಐ ಪ್ರತಿಭಟನಾ ನಿರತರಿಗೆ ಹೇಳಿದ್ದಾರೆ. ಮಕ್ಕಳು ಸುಳ್ಳು ಹೇಳುವುದಿಲ್ಲ. ಕೂಡಲೇ ಕ್ರಮ ಕೈಗೊಳ್ಳಿ, ಅವಹೇಳನಕಾರಿಯಾಗಿ ಪಾಠ ಮಾಡಿದ ಶಿಕ್ಷಕಿಗೆ ಸ್ಥಳದಲ್ಲೇ ಅಮಾನತು ಆದೇಶ ಹೊರಡಿಸಿ ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಈ ಮಧ್ಯೆ ಶಾಲಾ ಆಡಳಿತ ಮಂಡಳಿ ಸದಸ್ಯರು ಶಿಕ್ಷಕಿ ಪ್ರಭಾ ಅವರನ್ನು ಅಮಾನುತು ಮಾಡಿರುವುದಾಗಿ ತಿಳಿಸಿದ್ದಾರೆ. ಶಿಕ್ಷಣ ಇಲಾಖೆ ಆಂತರಿಕ ತನಿಖೆ ನಡೆಸಲಿದ್ದು, ವರದಿ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಶಾಲೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಶಾಸಕ ವೇದವ್ಯಾಸ್ ಕಾಮತ್ ಮತ್ತು ಪೋಷಕರಿಗೆ ಈ ಮಾಹಿತಿಯನ್ನು ನೀಡಲಾಗಿದೆ.