



ಮಂಗಳೂರು(ಕೇರಳ): ಕೊಚ್ಚಿ ಸಮೀಪದ ತ್ರಿಪುಣಿತುರಾದಲ್ಲಿ ವಸತಿ ಪ್ರದೇಶದಿಂದ ನಡೆಯುತ್ತಿದ್ದ ಅಕ್ರಮ ಪಟಾಕಿ ಗೋದಾಮಿನಲ್ಲಿಂದು ಸಂಭವಿಸಿದ ಭಾರೀ ಸ್ಪೋಟದಲ್ಲಿ ಓರ್ವ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಮೃತ ವ್ಯಕ್ತಿಯನ್ನು ತಿರುವನಂತಪುರಂ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ. ಸ್ಪೋಟದಲ್ಲಿ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಮನೆಗಳು ಮತ್ತು ಕೆಲವು ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಎರಡು ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.







ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಿದ್ದು, ಗೋದಾಮಿಗೆ ತಂದಿದ್ದ ಪಟಾಕಿಗಳ ಬೃಹತ್ ಸಂಗ್ರಹ ಸ್ಪೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಭಾರೀ ಸ್ಪೋಟದಿಂದಾಗಿ ಹಲವಾರು ಕಿಮೀ ದೂರದವರೆಗೂ ಭೂಮಿ ನಡುಗಿದ ಅನುಭವವಾಗಿದೆ. ಸ್ಥಳೀಯ ಅಗ್ನಿಶಾಮಕ ಠಾಣೆಯಲ್ಲೂ ಕಂಪನದ ಅನುಭವವಾಗಿದೆ. ಜನನಿಬಿಡ ಪ್ರದೇಶದಲ್ಲಿ ಪಟಾಕಿ ಗೋದಾಮು ನಡೆಸುತ್ತಿರುವ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಅದನ್ನು ನಿರ್ವಹಿಸುವವರು ಅದಕ್ಕೆ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಸಹಾಯಕ ಠಾಣಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಾಹನದಿಂದ ಪಟಾಕಿಗಳನ್ನು ಗೋದಾಮಿಗೆ ಇಳಿಸುವಾಗ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯ ಜನರು ಮಾಹಿತಿ ನೀಡಿದ್ದಾರೆ. ಸ್ಥಳೀಯ ದೇವಾಲಯದ ಉತ್ಸವದ ಭಾಗವಾಗಿ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಪೋಟದಿಂದ ಈ ಪ್ರದೇಶದ ಎರಡು ಅಂತಸ್ತಿನ ಕಟ್ಟಡಗಳ ಮೇಲ್ಛಾವಣಿ ತೀವ್ರವಾಗಿ ಹಾನಿಗೀಡಾಗಿರುವುದು ಕಂಡುಬಂದಿದೆ. ಅನೇಕ ಮನೆಗಳ ಬಾಗಿಲು ಮತ್ತು ಕಿಟಕಿಗಳು ಗೋಡೆಯಿಂದ ಹಾರಿಹೋಗಿವೆ. ವಾಹನಗಳಿಗೂ ಜಖಂ ಆಗಿವೆ ಎಂದು ತಿಳಿದು ಬಂದಿದೆ.















