ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಎರಡು ದಿನಗಳ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಕತಾರ್ ದೇಶಗಳ ಪ್ರವಾಸಕ್ಕೆ ತೆರಳಿರುವ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಎಕ್ಸ್ ನಲ್ಲಿ ಹಂಚಿಕೊಂಡಿರುವ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ತಮ್ಮ ಎರಡು ದಿನದ ಭೇಟಿಯ ಬಗ್ಗೆ ಇಂದು ಪ್ರಧಾನಿ ಮೋದಿಯವರು ಎಕ್ಸ್ ನಲ್ಲಿ ಬರೆದುಕೊಂಡಿದ್ದರು. ಮುಂದಿನ ಎರಡು ದಿನಗಳಲ್ಲಿ, ನಾನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯುಎಇ ಮತ್ತು ಕತಾರ್ಗೆ ಭೇಟಿ ನೀಡಲಿದ್ದೇನೆ. ಇದು ಈ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧವನ್ನು ಸದೃಢಗೊಳಿಸಲಿದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯುಎಇಗೆ ಇದು ನನ್ನ 7ನೇ ಭೇಟಿಯಾಗಿದೆ. ಕತಾರ್ನ ಅಮೀರ್ ತಮೀಮ್ ಬಿನ್ ಹಮದ್ ಅವರನ್ನೂ ಕೂಡ ಭೇಟಿ ಮಾಡಲಿದ್ದೇನೆ” ಎಂದು ಎಲ್ಲಾ ವಿವರಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಉತ್ತರಿಸಿರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ಪ್ರಧಾನಿ ಮೋದಿಯವರು ಕತಾರ್ನ ಅಮೀರ್ ಅವರ ಭೇಟಿ ಮಾಡುವ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಬೇಕು” ಎಂದು ಆಗ್ರಹಿಸಿದ್ದಾರೆ.
https://x.com/Srkians_Amit/status/1757341325819822277?s=20
ಇದಕ್ಕೆ ಕಾರಣ ವಿವರಿಸಿರುವ ಸುಬ್ರಮಣಿಯನ್ ಸ್ವಾಮಿ, “ಕತಾರ್ನಲ್ಲಿ ಗೂಢಚರ್ಯೆ ಮಾಡಿದ ಆರೋಪದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಅಧಿಕಾರಿಗಳು ಕತಾರ್ ಶೇಖ್ಗಳ ಮನವೊಪ್ಪಿಸುವಲ್ಲಿ ವಿಫಲರಾಗಿದ್ದರು. ಆ ಬಳಿಕ ಕತಾರ್ ಶೇಖ್ಗಳ ಜೊತೆಗೆ ಮಾತುಕತೆ ನಡೆಸುವಂತೆ ಮೋದಿಯವರು ಶಾರೂಖ್ ಖಾನ್ ಅವರಲ್ಲಿ ಕೇಳಿಕೊಂಡಿದ್ದರು. ಶಾರೂಖ್ ಖಾನ್ ಅವರ ಮಾತುಕತೆಯ ಫಲವಾಗಿ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗಾಗಿ, ಕತಾರ್ ಅಮೀರ್ ಅವರ ಭೇಟಿಯ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿ” ಎಂದು ಆಗ್ರಹಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿಯ ಈ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಬಗ್ಗೆ ನಟ ಶಾರೂಖ್ ಖಾನ್ ಆಗಲೀ, ವಿದೇಶಾಂಗ ವ್ಯವಹಾರಗಳ ಸಚಿವಾಲಯವಾಗಲೀ ಯಾವುದೇ ಹೇಳಿಕೆ ನೀಡಿಲ್ಲ. ಸುಬ್ರಮಣಿಯನ್ ಸ್ವಾಮಿಯವರು ನೀಡಿದ ಈ ಹೇಳಿಕೆಯ ಬೆನ್ನಲ್ಲೇ ನಟ ಶಾರೂಖ್ ಖಾನ್ ಕತಾರ್ ಶೇಖ್ಗಳ ಜೊತೆಗೆ ಓಡಾಡಿರುವ ಫೋಟೋಗಳು ಕೂಡ ಹರಿದಾಡಿದ್ದು, ವೈರಲ್ ಆಗಿದೆ.