ಜೆರೋಸಾ ಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷ ಹಾಗೂ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರ ನಿಯೋಗದ ಭೇಟಿ-ಶಾಸಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಒತ್ತಾಯ

ಮಂಗಳೂರು: ಇಲ್ಲಿನ‌ ವೆಲೆನ್ಸಿಯಾದ ಸೇಂಟ್‌ ಜೆರೋಸಾ ಶಾಲೆಯ ಶಿಕ್ಷಕಿಯ ವಿರುದ್ಧ ಧಾರ್ಮಿಕ ನಿಂದನೆ‌ ಆರೋಪ ಹೊರಿಸಿದ ಪ್ರಕರಣದ ಹಿಂದೆ‌ ರಾಜಕೀಯ ದುರುದ್ದೇಶ ಇದೆ. ಕೋಮುಹಿಂಸೆಗೆ ಪ್ರಚೋದನೆ ನೀಡುವ ಯೋಜಿತ ಷಡ್ಯಂತ್ರ ಇದು ಎಂದು ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರ ನಿಯೋಗ ಆರೋಪಿಸಿದೆ.

ನಿಯೋಗವು ಜೆರೋಸಾ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿತು. ಘಟನೆಯ ವಿವರ ಪಡೆದ ನಿಯೋಗವು ಮತೀಯ ದ್ವೇಷದ ದಾಳಿಗೆ ಗುರಿಯಾದ ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿತು. ಶಾಸಕರಾದ ವೇದವ್ಯಾಸ ಕಾಮತ್‌ ಹಾಗೂ ಡಾ.ವೈ. ಭರತ್ ಶೆಟ್ಟಿ ನೇತೃತ್ವದಲ್ಲಿ ಶಾಲೆಯ ಬಳಿ ದಾಂದಲೆ ನಡೆಸಲಾಗಿದೆ. ಶಾಸಕರ ನಡೆ ಅಪಾಯಕಾರಿಯಾಗಿದ್ದು, ಇವರ ವಿರುದ್ಧ ಕೋಮುಗಲಭೆಗೆ ಪ್ರಚೋದನೆಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ನಿಯೋಗ ಆಗ್ರಹಿಸಿದೆ. ನಿಯೋಗದ ನೇತೃತ್ವ ವಹಿಸಿದ್ದ ಮುನೀರ್‌ ಕಾಟಿ‍ಪಳ್ಳ, ‘ಸಂಘ ಪರಿವಾರದ ಪ್ರಮುಖರು ಮತ್ತು ವಿದ್ಯಾರ್ಥಿಗಳ ಪೋಷಕರು ಒಟ್ಟಾಗಿ ಶಾಲೆಗೆ ಬರಲು ಕಾರಣವೇನು? ಶಾಸಕ ವೇದವ್ಯಾಸ ಕಾಮತ್‌ ಇಲ್ಲಿಗೆ ಬಂದ‌ ನಂತರದ‌ ಬೆಳವಣಿಗೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ವೈ.ಭರತ್ ಶೆಟ್ಟಿ ಜವಾಬ್ದಾರಿಯುತ ನಾಯಕರಾಗಿ ಈ ವಿವಾದ ಇತ್ಯರ್ಥಪಡಿಸುವ ಬದಲು ಸಂಘ ಪರಿವಾರದವರಂತೆ ವರ್ತಿಸಿದ್ದಾರೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರ‌ ಜೊತೆ ಚರ್ಚಿಸಿ ಏನು ನಡೆದಿದೆ ಎಂದು ತಿಳಿದುಕೊಳ್ಳಬೇಕಾದ ಅವರು ಗೂಂಡಾ ರೀತಿ ನಡೆದುಕೊಂಡಿದ್ದಾರೆ. ಶಾಲೆಯ ಗೇಟ್‌ ಬಳಿ ನಿಂತು ಧಾರ್ಮಿಕ‌ ಘೋಷಣೆ ಕೂಗಿದ್ದಾರೆ.‌ ಧಾರ್ಮಿಕ ಸಂಕೇತದ ಶಾಲುಗಳನ್ನು ಬೀಸಿದ್ದಾರೆ.‌ ಭರತ್ ಶೆಟ್ಟಿ ಅವರಂತೂ ಸಂವಿಧಾನಬಾಹಿರ‌ವಾದ ಹೇಳಿಕೆ ನೀಡಿದ್ದಾರೆ. ಶಾಸಕ‌ರಾದವರು ನಡೆದುಕೊಳ್ಳುವ ರೀತಿ ಇದಲ್ಲ. ಇವರ ವರ್ತನೆ ಮಂಗಳೂರಿಗೆ ಕಪ್ಪುಚುಕ್ಕೆ’ ಎಂದು ಟೀಕಿಸಿದರು. ‘ಹಿಜಾಬ್ ವಿವಾದದ ಸಂದರ್ಭದಲ್ಲಿ ಸಂವಿಧಾನ ಬೇಕೋ ಧರ್ಮ‌ ಬೇಕೋ ಎಂದು ಕೇಳಿದವರು ಈಗ ಧಾರ್ಮಿಕ ನಂಬಿಕೆ‌ ಮುಖ್ಯ ಎನ್ನುತ್ತಿದ್ದಾರೆ. ಹಿಂದೂ ವಿದ್ಯಾರ್ಥಿನಿಯರಿಗೆ ಅವಮಾನ‌ ಮಾಡುತ್ತೀರಿ ಎಂದು ಸುಳ್ಳು ಆರೋಪ‌ ಮಾಡಿದ್ದಾರೆ. ಮಕ್ಕಳನ್ನು ಧಾರ್ಮಿಕ‌ ದ್ವೇಷ ಮೂಡಿಸಲು ಹಾಗೂ ರಾಜಕೀಯ ದುರುದ್ದೇಶಕ್ಕೆ ದುರ್ಬಳಕೆ‌ ಮಾಡಿದ್ದು ಕ್ರಿಮಿನಲ್‌ ಅಪರಾಧ. ಇದಕ್ಕಾಗಿ ಶಾಸಕ‌ ವೇದವ್ಯಾಸ ಕಾಮತ್ ವಿರುದ್ಧ ಸರ್ಕಾರ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ವಿಧಾನಸಭಾಧ್ಯಕ್ಷರೂ ಅವರ ವಿರುದ್ದ ಕ್ರಮ‌ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಶಿಕ್ಷಕಿ ಪಾಠ ಮಾಡುವಾಗ ಹಿಂದೂ ಧರ್ಮದ ಅವಹೇಳನ‌ ಮಾಡಿದ್ದಾರೆ ಎನ್ನುವ ಆರೋಪಕ್ಕೆ ಆಧಾರ ಸಿಗುತ್ತಿಲ್ಲ. ರವೀಂದ್ರ ನಾಥ ಠ್ಯಾಗೋರ್‌ ‘ವರ್ಕ್ ಆ್ಯಂಡ್ ವರ್ಕ್ ಶಿಪ್’ ಪದ್ಯವನ್ನು ಬೋಧಿಸುವಾಗ ಶಿಕ್ಷಕಿ ಇಂಗ್ಲಿಷ್‌ನಲ್ಲಿ ಉಲ್ಲೇಖಿಸಿದ ವಿಷಯಗಳನ್ನು ಮತೀಯ ಶಕ್ತಿಗಳು ದುರುದ್ದೇಶದಿಂದ ತಿರುಚಿ ಪೋಷಕರನ್ನು ದಾರಿ ತಪ್ಪಿಸಿವೆ ಎಂಬುದು ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದಾಗ ಮೇಲ್ನೋಟಕ್ಕೆ ಕಂಡುಬಂದಿದೆ. ಶಿಕ್ಷಕಿಯನ್ನು ಅವಮಾನಿಸುವುದು ಹಾಗೂ ಕ್ರೈಸ್ತರು ನಡೆಸುವ ಶಿಕ್ಷಣ ಸಂಸ್ಥೆಗಳ ಮೇಲೆ‌ ಜನರು ಹೊಂದಿರುವ ವಿಶ್ವಾಸಕ್ಕೆ‌ ಧಕ್ಕೆ‌ಯನ್ನು ಉಂಟುಮಾಡುವ ಉದ್ದೇಶ ಅವರದು. ಈ ಬಗ್ಗೆಯೂ ತನಿಖೆ ನಡೆಸಲಿ. ಆದರೆ, ಈಗಿನ ಡಿಡಿಪಿಐ ನೇತೃತ್ವದಲ್ಲಿ ತನಿಖೆ ಬೇಡ. ಅವರು ಶಾಸಕರ ಕೈಗೊಂಬೆಯಂತೆ ವರ್ತಿಸಿದ್ದಾರೆ. ಅವರ ವಿರುದ್ಧವೂ ಕ್ರಮವಹಿಸಬೇಕು’ ಎಂದರು. ‘ಈ ಬೆಳವಣಿಗೆಗಳು ಕೋಮು ದ್ವೇಷ, ಪೂರ್ವಗ್ರಹಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ನಿವೃತ್ತ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಹಾಗೂ ವಕೀಲರು, ಇತರ ಗಣ್ಯರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನು ಸರ್ಕಾರ ರಚಿಸಬೇಕು. ಈ ಪ್ರಕರಣದ ಎಲ್ಲಾ ಆಯಾಮಗಳನ್ನು ಅಧ್ಯಯನ ಮಾಡಿ ಸಮಗ್ರ ವರದಿಯನ್ನು ಸಮಾಜದ ಮುಂದಿಡಬೇಕು‘ ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ, ‘ಯಾವುದಾದರೂ ವಿದ್ಯಾರ್ಥಿಯ ಪೋಷಕರು ಲಿಖಿತ ದೂರು ನೀಡಿದ್ದಾರೆಯೇ.‌ ಇದ್ದರೆ ಅದನ್ನು ವೇದವ್ಯಾಸ ಕಾಮತ್ ಬಹಿರಂಗಪಡಿಸಬೇಕು. ಶಿಕ್ಷಕಿ ತಪ್ಪೆಸಗಿದ್ದರೆ, ಆ ಬಗ್ಗೆ ವಿದ್ಯಾರ್ಥಿಯ ಪೋಷಕರು ಶಿಕ್ಷಕ –ರಕ್ಷಕ ಸಂಘದ ಗಮನಕ್ಕೆ ತಂದಿಲ್ಲ ಏಕೆ’ ಎಂದು ಪ್ರಶ್ನಿಸಿದರು. ‘ಲೋಕಸಭಾ ಚುನಾವಣೆಗೆ ಮತೀಯ ಧ್ರುವೀಕರಣ ನಡೆಸಿ ಮತ ಗಿಟ್ಟಿಸಲು ನಡೆಸಿದ ಸಂಚಿನ ಒಂದು ಭಾಗ ಇದು. ಅಪರಿಚಿತ ಮಹಿಳೆಯೊಬ್ಬರು ನಡೆಸಿದ ಸಂಭಾಷಣೆಯ ‌ಧ್ವನಿಮುದ್ರಿತ ಸಂದೇಶವನ್ನು ಸಾಮಾಜಿಕ ಜಾಲಯತಾಣಗಳಲ್ಲಿ ಹರಿಯಬಿಟ್ಟು ಶಿಕ್ಷಕಿಯ ಮೇಲೆ ಆರೋಪ ಮಾಡಲಾಗಿದೆ. ಈ ಮಹಿಳೆಯನ್ನು ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.ನಿಯೋಗದಲ್ಲಿ ವಕೀಲರಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಸಾಮಾಜಿಕ ಕಾರ್ಯಕರ್ತರಾದ ಮಂಜುಳಾ ನಾಯಕ್, ಪಿ.ವಿ ಮೋಹನ್, ಕೆ.ಅಶ್ರಫ್, ಮುಹಮ್ಮದ್ ಕುಂಜತ್ತಬೈಲ್, ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಜಯಂತಿ ಬಿ ಶೆಟ್ಟಿ, ಭಾರತಿ ಬೋಳಾರ, ಸ್ಟ್ಯಾನಿ ಅಳ್ವಾರಿಸ್, ಎರಿಕ್ ಲೋಬೊ, ಅನಿಲ್ ಲೋಬೊ, ಸಮರ್ಥ್ ಭಟ್, ಯೋಗೀಶ್ ನಾಯಕ್, ನೆಲ್ಸನ್ ರೋಚ್, ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗಿತಾ, ನಿವೃತ್ತ ಪ್ರಾಧ್ಯಾಪಕ ಶಿವರಾಮ ಶೆಟ್ಟಿ, ವಸಂತ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here