ಬಿಹಾರ ಸಿಎಂ ನಿತೀಶ್​ ಕುಮಾರ್​ಗೆ ಬಾಂಬ್‌ ಸ್ಪೋಟಿಸಿ ಕೊಲೆ ಬೆದರಿಕೆ-ದಾವಣಗೆರೆಯಲ್ಲಿ ಆರೋಪಿಯ ಬಂಧನ

ಮಂಗಳೂರು(ಬೆಂಗಳೂರು): ಬಿಹಾರ ಸಿಎಂ ನಿತೀಶ್​ ಕುಮಾರ್​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಸೋನು ಪಾಸ್ವಾನ್​ ಎಂಬಾತನನ್ನು  ಬಿಹಾರ ಪೊಲೀಸರು ಕರ್ನಾಟಕದಲ್ಲಿ ಬಂಧಿಸಿದ್ದಾರೆ. ಸೋನು ಪಾಸ್ವಾನ್ ಕರ್ನಾಟಕದ ದಾವಣಗೆರೆಯಲ್ಲಿ ರೈಸ್ ಮಿಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆತ ಮೂಲತಃ ಬಿಹಾರದ ಸಮಸ್ತಿಪುರ ನಿವಾಸಿ ಎಂಬುದು ತಿಳಿದುಬಂದಿದೆ. ಬಂಧಿತನನ್ನು ಫೆ.14ರ ರಾತ್ರಿ ಬಿಹಾರದ ಪಾಟ್ನಾಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯು ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಳ್ಳದಿದ್ದರೆ ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ನಿತೀಶ್ ಕುಮಾರ್​ಗೆ ಬೆದರಿಕೆ ಹಾಕಿದ್ದ.

ಆರೋಪಿಯು ಜನವರಿ 30 ರಂದು ಬಿಹಾರದ ಪೊಲೀಸ್ ಮಹಾನಿರ್ದೇಶಕ ಆರ್‌ಎಸ್ ಭಟ್ಟಿ ಅವರಿಗೆ ವಾಟ್ಸಾಪ್ ಸಂದೇಶ ಮತ್ತು ಆಡಿಯೊ ಕ್ಲಿಪ್ ಕಳುಹಿಸಿದ್ದ. ಡಿಜಿಪಿಗೆ ಕಳುಹಿಸಿದ ಸಂದೇಶ ಮತ್ತು ಆಡಿಯೊ ಕ್ಲಿಪ್‌ನಲ್ಲಿ, ‘ಬಿಜೆಪಿಯಿಂದ ಬೇರ್ಪಡದಿದ್ದರೆ ಸಿಎಂ ನಿತೀಶ್ ಕುಮಾರ್ ಮತ್ತು ಇತರ ಶಾಸಕರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಿಹಾರ ಪೊಲೀಸರು ಈ ಬಗ್ಗೆ ತಕ್ಷಣವೇ ತನಿಖೆ ಆರಂಭಿಸಿದ್ದು, ಆರೋಪಿಯ ಪತ್ತೆಗೆ ಬಲೆಬೀಸಿದ್ದರು. ಡಿಜಿಪಿಗೆ ಸಂದೇಶ ಬಂದಿದ್ದ ಮೊಬೈಲ್ ಸಂಖ್ಯೆಯ 84xxxxxx08 ಮೂಲ ಪರಿಶೀಲಿಸಿದಾಗ ಸ್ಥಳ ಕರ್ನಾಟಕದ ದಾವಣಗೆರೆ ಎಂಬದು ತಿಳಿದುಬಂದಿದೆ. ಆರೋಪಿಗಳ ಪತ್ತೆಗೆ ಬಿಹಾರ ಪೊಲೀಸರ ತಂಡ ಕರ್ನಾಟಕಕ್ಕೆ ಬಂದಿತ್ತು. ನಂತರ ಕರ್ನಾಟಕ ಪೊಲೀಸರ ಸಹಾಯದಿಂದ ಆರೋಪಿಯನ್ನು ದಾವಣಗೆರೆಯಲ್ಲಿ ಬಂಧಿಸಲಾಗಿದೆ. ಆರೋಪಿಯು ದಾವಣಗೆರೆಯ ಬಿಎನ್‌ಎಂ ಹೈಟೆಕ್ ಆಗ್ರೋ ಇಂಡಸ್ಟ್ರೀಸ್ ರೈಸ್ ಮಿಲ್‌ನಲ್ಲಿ ಗೋಣಿಚೀಲ ಹೊಲಿಗೆ ಕೆಲಸ ಮಾಡುತ್ತಿದ್ದ. ಬಿಹಾರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನಕ್ಕೆ ಅಲ್ಲಿನ ಸರ್ಕಾರವೇ ಹೊಣೆ ಎಂದು ವಿಚಾರಣೆ ವೇಳೆ ಆತ ದೂರಿದ್ದಾನೆ. ಆರೋಪಿಯ ಕುಟುಂಬದವರು ಹಸನ್‌ಪುರದ ದಯಾನಗರದಲ್ಲಿ ವಾಸಿಸುತ್ತಿದ್ದಾರೆ. ಇಷ್ಟು ಕ್ಲಿಪ್‌ಗಳನ್ನು ಕಳುಹಿಸಿದ ನಂತರವೂ ಬಿಹಾರದಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ಚಲನವಲನ ಕಂಡುಬಂದಿರಲಿಲ್ಲ. ಆದ್ದರಿಂದ ಎಲ್ಲಾ ಕ್ಲಿಪ್‌ಗಳನ್ನು ಕೆಲವು ಮಾಧ್ಯಮಗಳಿಗೆ ನೀಡಲು ಹೊರಟಿದ್ದಾಗಿ ಸೋನು ಹೇಳಿದ್ದಾನೆ. ಆದರೆ ಅದಕ್ಕೂ ಮೊದಲು ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

 

LEAVE A REPLY

Please enter your comment!
Please enter your name here