ಭಾಷೆಯ ಮೇಲೆ ಹಿಡಿತವಿರಲಿ-ಈಶ್ವರಪ್ಪ, ಅನಂತ್ ಕುಮಾರ್ ಹೆಗ್ಡೆ‌ಗೆ ಹೈಕೋರ್ಟ್‌ ಎಚ್ಚರಿಕೆ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಅನಂತ್ ಕುಮಾರ್ ಹೆಗ್ಡೆ‌ ಮತ್ತು ಕೆ.ಎಸ್‌ ಈಶ್ವರಪ್ಪ ಅವರಿಗೆ ಹೈಕೋರ್ಟ್‌ ತಾತ್ಕಾಲಿಕ ರಿಲೀಫ್ ನೀಡಿದ್ದು, ಬಳಸುವ ಭಾಷೆಯ ಮೇಲೆ ಎಚ್ಚರಿಕೆ ಇರಲಿ ಎಂದು ಮೌಖಿಕ ಎಚ್ಚರಿಕೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ‌ ಬಳಕೆ ಮಾಡಿರುವುದು ಕೀಳು ಮಟ್ಟದ ಭಾಷೆ, ಇದು ಶೋಭೆ ತರುವಂಥದ್ದಲ್ಲ ಎಂದು ಹೈಕೋರ್ಟ್‌ ಮೌಖಿಕವಾಗಿ ಹೇಳಿರುವುದಾಗಿ ಬಾರ್ & ಬೆಂಚ್ ವರದಿ ತಿಳಿಸಿದೆ. ರಾಮ ಮಂದಿರ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅನಂತಕುಮಾರ್‌ ಹೆಗ್ಡೆ, ತಮ್ಮ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ನ್ಯಾ. ದೀಕ್ಷಿತ್‌ ಅವರು, “ಅನಂತ್‌ ಕುಮಾರ್ ಹೆಗ್ಡೆ ಉತ್ತಮ ವಾಗ್ಮಿಯಾಗಿರಬಹುದು. ಹಾಗಂತ ಅವರು, ಮುಖ್ಯಮಂತ್ರಿಗೆ ಗೌರವ ಕೊಡಲ್ಲ ಎಂದರೆ ಹೇಗೆ? ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿ, ಪ್ರಧಾನಿ ಮಂತ್ರಿಗೆ ಗೌರವ ಕೊಡುವುದು ಜವಾಬ್ದಾರಿ. ಮುಖ್ಯಮಂತ್ರಿಗಳ ಕಾರ್ಯ ನೀತಿ ನಿಮಗೆ ಇಷ್ಟವಾಗದಿದ್ದರೆ, ಅದಕ್ಕೆ ಸರಿಯಾದ ರೀತಿಯಲ್ಲಿ ಟೀಕೆ ವ್ಯಕ್ತಪಡಿಸಬಹುದು. ಆದರೆ, ಕೀಳು ಭಾಷೆಯ ಪದ ಬಳಕೆ ಬಗ್ಗೆ ಎಚ್ಚರವಿರಲಿ ಎಂದು ಖಾರವಾಗಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ. ನೀ ಬರಲಿ, ಬಿಡು ರಾಮ ಜನ್ಮಭೂಮಿ ನಿನ್ನದಲ್ಲ ಮಗನೇ ಎಂದು ಬಿಜೆಪಿ ಸಂಸದ ಅನಂತಕುಮಾರ್‌ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದರು.

ಅವರಿಗೆ ನಾವು ಮತ ಹಾಕುತ್ತೇವೋ, ಇಲ್ಲವೋ ಅವರು ನಮ್ಮ ಮುಖ್ಯಮಂತ್ರಿ. ಏಕವಚನದಲ್ಲಿ ಮಾತನಾಡುವುದು ಶೋಭೆ ತರುವಂಥದಲ್ಲ. ಅವರಾಗಲಿ, ನೀವಾಗಲಿ ಹೀಗೆ ಮಾತನಾಡುವಂತಿಲ್ಲ. ಮುಖ್ಯಮಂತ್ರಿಗಳ ನೀತಿಯನ್ನು ನಾವು ಇಷ್ಟ ಪಡುತ್ತೇವೋ ಇಲ್ಲವೋ, ಅವರು ನಮ್ಮ ಮುಖ್ಯಮಂತ್ರಿ. ಅವರನ್ನು ಬಿಟ್ಟು ನಮಗೆ ಬೇರೆ ಮಖ್ಯಮಂತ್ರಿ ಇದ್ದಾರೆಯೇ? ಮುಖ್ಯಮಂತ್ರಿ ಅಥವಾ ಪ್ರಧಾನ ಮಂತ್ರಿಯನ್ನು, ನಾವು ಒಪ್ಪಲಿ ಬಿಡಲಿ.. ಅವರು ನಮ್ಮ ರಾಜ್ಯದವರು. ಚುನಾವಣೆಯಲ್ಲಿ ಸೋಲಿಸಿ, ಅದು ಬೇರೆ ಮಾತು” ಎಂದು ನ್ಯಾಯಮೂರ್ತಿ ಹೇಳಿದ್ದಾಗಿ ವರದಿಯಾಗಿದೆ.ಅಂತಿಮವಾಗಿ ಪೀಠವು ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲ ಪವನ್‌ ಚಂದ್ರ ಶೆಟ್ಟಿ ಹೆಚ್, ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ್‌ ಅವರು ವಾದ ಮಂಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಪದ ಬಳಕೆಗೆ ಸಂಬಂಧಿಸಿದಂತೆ ಅನಂತಕುಮಾರ್‌ ಹೆಗ್ಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 153,153ಎ, 505(2) ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರ ವಜಾ ಕೋರಿ ಹೆಗ್ಡೆ ಹೈಕೋರ್ಟ್‌ ಕದ ತಟ್ಟಿದ್ದಾರೆ.

ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಎಷ್ಟೋ ಕಡೆ ಸ್ವಲ್ಪ ಏನೋ ಮಾತನಾಡಿದರೆ ಬೆಂಕಿ ಹತ್ತುವ ಪರಿಸ್ಥಿತಿ ಇದೆ. ಹಾಗಾಗಿ, ಭಾಷಾ ಪ್ರಯೋಗ ಜವಾಬ್ದಾರಿಯುತವಾಗಿರಬೇಕು. ಸಂಸ್ಕೃತಿ ಬಿಂಬಿತವಾಗುವಂತೆ ಮಾತನಾಡಬೇಕು ಎಂದು ಹೈಕೋರ್ಟ್‌ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಅವರಿಗೆ ಮೌಖಿಕವಾಗಿ ಸೂಚಿಸಿದೆ. ದೇಶವನ್ನು ಛಿದ್ರ ಮಾಡುತ್ತೇವೆ ಎಂದು ಹೋರಾಡುತ್ತಿರುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಎಂಬ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ದಾವಣಗೆರೆ ಎಕ್ಷ್‌ಟೆನ್ಷನ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠವು ನಮ್ಮ ರಾಜಕೀಯ ನಾಯಕರೆಲ್ಲಾ ಭಾಷೆಯ ಮೇಲೆ ಎಷ್ಟೊಂದು ದೌರ್ಜನ್ಯ ಎಸಗುತ್ತಾರೆ!? ನಮ್ಮ ನಾಯಕರು ಎಂದು ಶಾಲೆಯ ಮಕ್ಕಳೆಲ್ಲಾ ನೋಡುತ್ತಿರುತ್ತಾರೆ. ಎಲ್ಲರೂ ಬಹುಮುಖ್ಯವಾಗಿ ನಮ್ಮ ಧುರೀಣರು ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ಮಾತನಾಡುವಾಗ ಸಂಸ್ಕೃತಿ ಕಾಣುವ ರೀತಿಯಲ್ಲಿ ಏಕೆ ಮಾತನಾಡಬಾರದು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರು, ಶಾಸಕರು ಯಾರೇ ಇರಬಹುದು. ಅವರೆಲ್ಲಾ ನಮ್ಮ ಪರವಾಗಿ ಕೆಲಸ ಮಾಡುತ್ತಾರೆ. ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು ಎಂಬುದು ನನ್ನ ಪ್ರಾರ್ಥನೆ ಎಂದು ಹೇಳಿದೆ. ಈಶ್ವರಪ್ಪ ವಿರುದ್ಧದ ಎಫ್‌ಐಆರ್‌ ಮತ್ತು ಮುಂದಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ವಿಧಿಸಿ, ಪ್ರತಿವಾದಿಗಳಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

LEAVE A REPLY

Please enter your comment!
Please enter your name here