ಮಂಗಳೂರು(ಚಿಕ್ಕಮಗಳೂರು): ನಕ್ಸಲ್ ಚಟುವಟಿಕೆಯ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಶ್ರೀಮತಿಗೆ ಎನ್.ಆರ್.ಪುರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಚಿಕ್ಕಮಗಳೂರು ಜಿಲ್ಲೆ ಮೂಲದ ಶ್ರೀಮತಿಯ ವಿರುದ್ಧ ಸುಮಾರು 9ಕ್ಕೂ ಹೆಚ್ಚು ಪ್ರಕರಣಗಳಿದ್ದವು. ಕರಪತ್ರ ಹಂಚಿಕೆ, ಬ್ಯಾನರ್ ಕಟ್ಟಿದ್ದು, ಸರ್ಕಾರಿ ಆಸ್ತಿ ನಷ್ಟ, ವಿದ್ವಂಸಕ ಕೃತ್ಯದ ಸಂಚು, ಆಯುಧಗಳನ್ನ ಇಟ್ಟುಕೊಂಡಿದ್ದು, ಟೆಂಟ್ ಹಾಕಿದ್ದು, ಗನ್ ತೋರಿಸಿ ಹೆದರಿಸಿ ಸುಲಿಗೆ, ಪೊಲೀಸರಿಗೆ ಸಪೋರ್ಟ್ ಮಾಡದಂತೆ ಬೆದರಿಸಿದ್ದು ಮೊದಲಾದ ಆರೋಪಗಳು ಶ್ರೀಮತಿ ಮೇಲಿದೆ. ಕೇರಳದಲ್ಲಿ ಬಂಧನವಾಗಿದ್ದ ಶ್ರೀಮತಿಯನ್ನು ಕಾರ್ಕಳ ಪೊಲೀಸರ ವಶದಲ್ಲಿದ್ದಳು. ಕಾರ್ಕಳ ಪೊಲೀಸರ ಬಳಿಯಿಂದ ಶೃಂಗೇರಿ ಪೊಲೀಸರು ವಶಕ್ಕೆ ಪಡೆದು ಎನ್.ಆರ್.ಪುರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ.
ಇನ್ನೊಂದೆಡೆ ಕಳೆದ ಇಪ್ಪತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಮೂಡಿಗೆರೆಯ ಅಂಗಡಿ ಗ್ರಾಮದ ನಕ್ಸಲ್ ಸುರೇಶ್ ಎಂಬ ವ್ಯಕ್ತಿಯನ್ನು ಕೇರಳದ ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಲೆನಾಡಿನ ನಕ್ಸಲ್ ಚಳುವಳಿಯ ಪ್ರಮುಖರಲ್ಲಿ ಒಬ್ಬನಾಗಿದ್ದ ಸುರೇಶ್ ಅಲಿಯಾಸ್ ಮಹದೇವ ಕೇರಳದ ಕಣ್ಣೂರಿನ ಅರಣ್ಯದಲ್ಲಿ ಕಾಡಾನೆ ದಾಳಿಯಲ್ಲಿ ಗಾಯಗೊಂಡು ಬಿದ್ದಿದ್ದ ಸುರೇಶ್ ಗೆ ಚಿಕಿತ್ಸೆ ಕೊಡಿಸಿದ ಪೊಲೀಸರಿಗೆ ವಿಚಾರಣೆ ವೇಳೆ ಆತ ನಕ್ಸಲ್ ಎಂದು ಗುರುತಿಸಿದ್ದಾರೆ. ಮೂಲತಃ ಮೂಡಿಗೆರೆ ತಾಲೂಕಿನ ಗೋಣಿಬೀಡಿನ ಅಂಗಡಿ ಗ್ರಾಮದ ಸುರೇಶ್ ಇಪ್ಪತ್ತು ವರ್ಷಗಳಿಂದ ಕಣ್ಮರೆಯಾಗಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಎನ್ನಲಾಗಿದೆ. ಸರಕಾರ ಈತನನ್ನು ಹಿಡಿದು ಕೊಟ್ಟವರಿಗೆ 5 ಲಕ್ಷ ಬಹುಮಾನ ಸಹ ಘೋಷಿಸಿತ್ತು. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ನಕ್ಸಲೀಯ ಕೃತ್ಯ ಪ್ರಕರಣಗಳಲ್ಲಿ ಈತನು ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.