ಮಂಗಳೂರು(ಬಾಗಲಕೋಟೆ): ರಂಭಾಪುರಿ ಶ್ರೀಗಳ ಕಾರಿಗೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ.
ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ರಂಭಾಪುರಿ ಶ್ರೀ ವಿರುದ್ಧ ಜನರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಂಭಾಪುರಿ ಶ್ರೀಗಳು ತೆರಳುವ ವಾಹನವನ್ನು ಅಡ್ಡಗಟ್ಟಲು ಪ್ರಯತ್ನ ನಡೆದಿದೆ. ಚಪ್ಪಲಿ ಎಸೆತದ ಬಳಿಕ ತಳ್ಳಾಟ, ನೂಕಾಟ ನಡೆದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಕಲಾದಗಿಯ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ ರಂಭಾಪುರಿ ಶ್ರೀಗಳು ಮಧ್ಯಸ್ಥಿಕೆ ವಹಿಸಿ ತಮ್ಮದೇ ಪೀಠದ ಶಿಷ್ಯರಾಗಿರುವ ಕೆ.ಎಮ್.ಗಂಗಾಧರ ಸ್ವಾಮೀಜಿಯನ್ನ ನೇಮಕ ಮಾಡಿದ್ದರು.
ಗ್ರಾಮಸ್ಥರ ಸಮ್ಮುಖದಲ್ಲಿ ಉತ್ತರಾಧಿಕಾರಿ ನೇಮಕ ಮಾಡದೇ ಏಕಪಕ್ಷೀಯವಾಗಿ ರಂಭಾಪುರಿ ಶ್ರೀಗಳು ನಿರ್ಧಾರ ತೆಗೆದುಕೊಂಡಿದ್ದಾರೆಂದು ಕೆಲ ಗ್ರಾಮಸ್ಥರು ಆರೋಪಿಸಿದ್ದರು. ನಂತರ ರಂಭಾಪುರಿ ಶ್ರೀಗಳ ವಿರೋಧಿ ಬಣ ನೂತನ ಸ್ವಾಮೀಜಿಯನ್ನಾಗಿ ಮಹಾಂತ ದೇವರು ಸ್ವಾಮೀಜಿಯನ್ನ ಕರೆತಂದು ಅದ್ಧೂರಿ ಮೆರವಣಿಗೆ ಮಾಡಿತ್ತು. ಪರ, ವಿರೋಧ ಬಣಗಳು ಹುಟ್ಟಿಕೊಂಡು ಪ್ರಕರಣ ಈಗ ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದೆ. ಇಂದು ಗಂಗಾಧರ ಸ್ವಾಮೀಜಿ ಮಠದ ಹೊಲದ ಉಳುಮೆಗೆ ಮುಂದಾದಾಗ ಭಕ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠದ ಒಟ್ಟು 72 ಎಕ್ರೆ ಭೂಮಿಯನ್ನು ರಂಭಾಪುರಿ ಶ್ರೀ ಮತ್ತು ಗಂಗಾಧರ ಸ್ವಾಮೀಜಿ ಲಪಟಾಯಿಸಲು ಮುಂದಾಗಿದ್ದಾರೆ ಎನ್ನುವುದು ಭಕ್ತರ ಆರೋಪ. ವಿವಾದ ಕೋರ್ಟ್‌ನಲ್ಲಿರುವಾಗ ಕಟ್ಟಡ ದುರಸ್ತಿ ಹಾಗೂ ಜಮೀನು ಉಳುಮೆಗೆ ಜನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಗಲಾಟೆ ನಡೆಯುತ್ತಿರುವಾಗಲೇ ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ರಂಭಾಪುರಿ ಶ್ರೀಗಳು ತೆರಳುತ್ತಿದ್ದರು. ಈ ವೇಳೆ ರಂಭಾಪುರಿ ಶ್ರೀಗಳು ಕಾರಿನ ಮೇಲೆ ಚಪ್ಪಲಿ ಎಸೆಯಲಾಗಿದೆ.