ಮಂಗಳೂರು: ನಗರದ ರಥಬೀದಿಯ ವೆಂಕಟರಮಣ ದೇವಸ್ಥಾನ ಆವರಣದಲ್ಲಿ ನಡೆದ ಓಕುಳಿ ಹಬ್ಬದಲ್ಲಿ ಸಾವಿರಾರು ಮಂದಿ ಬಣ್ಣಗಳನ್ನು ಹಚ್ಚಿಕೊಂಡು, ನೃತ್ಯ ಮಾಡಿ ಸಂಭ್ರಮಿಸಿದರು.
ಮಂಗಳೂರು ರಥೋತ್ಸವ ಎಂದೇ ಹೆಸರುವಾಸಿಯಾಗಿರುವ ವೆಂಕಟರಮಣ ದೇವಸ್ಥಾನದ ವರ್ಷಾವಧಿ ಉತ್ಸವದ ಕೊನೇ ದಿನದಂದು ಓಕುಳಿ ಹಬ್ಬ ನಡೆಯುತ್ತದೆ. ಜಿಎಸ್‌ಬಿ ಸಮುದಾಯದವರ ಈ ಓಕುಳಿ ಹಬ್ಬದಲ್ಲಿ ಭೇದ ಭಾವ ಮರೆತು ಒಬ್ಬರಿಗೊಬ್ಬರು ಬಣ್ಣ ಹಚ್ಚುತ್ತಾ ಸಂತಸ ಹಂಚಿಕೊಳ್ಳುವ ಮೂಲಕ ಪ್ರೀತಿ, ಸಹೋದರತ್ವ, ಬಾಂಧವ್ಯವನ್ನು ವ್ಯಕ್ತಪಡಿಸಿದರು.
ದೇವಸ್ಥಾನ ಮುಂಭಾಗದಲ್ಲಿ ಲಯಬದ್ಧ ವಾದ್ಯದ ಸಂಗೀತಕ್ಕೆ ಪೂರಕವಾಗಿ ಬಣ್ಣಗಳನ್ನು ಪರಸ್ಪರ ಹಚ್ಚಿಕೊಳ್ಳುತ್ತಾ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿದರು. ಒಂದೆಡೆ ಯುವಕರು ಬಣ್ಣ ಎರಚುವ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆ. ಅಲ್ಲಲ್ಲಿ ಮಕ್ಕಳು ಪಿಚಕಾರಿಗಳಲ್ಲಿ ಬಣ್ಣ ನೀರು ತುಂಬಿಸಿ, ಪರಸ್ಪರ ಚಿಮ್ಮಿಸುತ್ತಾ ಖುಷಿ ಪಟ್ಟರು. ಮತ್ತೆ ಹಲವರು ದೂರದಲ್ಲಿ ಈ ಸಂಭ್ರಮದ ಓಕುಳಿ ಹಬ್ಬವನ್ನು ಕಣ್ಣು ತುಂಬಿಕೊಂಡರು. ಸಣ್ಣ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ಈ ಓಕುಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಬೆಳಗ್ಗೆ ದೇವರ ಮೂರ್ತಿಯ ರಥಯಾತ್ರೆ ಆರಂಭಗೊಳ್ಳುತ್ತಿರುವಂತೆಯೇ ಈ ಓಕುಳಿ ಹಬ್ಬ ಆರಂಭಗೊಳ್ಳುತ್ತದೆ. ಬಳಿಕ ಸಂಜೆಯವರೆಗೆ ಇದು ಮುಂದುವರಿಯುತ್ತದೆ.