ಮಂಗಳೂರು(ಬೆಂಗಳೂರು): ರಾಜ್ಯಾದ್ಯಂತ ಹುಕ್ಕಾ ಬಾರ್ ನಿಷೇಧಿಸುವ ಮಸೂದೆಯನ್ನು ರಾಜ್ಯ ಸರಕಾರ ಫೆ.21ರಂದು ಅಧಿವೇಶನದಲ್ಲಿ ಅಂಗೀಕರಿಸಿದೆ. ನಿಷೇಧ ಉಲ್ಲಂಘಿಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಲಾಗುವುದು. ಅಧಿಸೂಚನೆಯ ಪ್ರಕಾರ, ತನ್ನ ನಾಗರಿಕರ ಆರೋಗ್ಯವನ್ನು ರಕ್ಷಿಸಲು ಮತ್ತು ತಂಬಾಕು ಸಂಬಂಧಿತ ರೋಗಗಳನ್ನು ತಡೆಗಟ್ಟುವ ಸಲುವಾಗಿ ಅಸ್ತಿತ್ವದಲ್ಲಿರುವ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ನಿಷೇಧವನ್ನು ವಿಧಿಸಲಾಗಿದೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನು ರಾಜ್ಯ ಸರಕಾರ ನಿಷೇಧಿಸಿದೆ. ತಿದ್ದುಪಡಿ ಮಾಡಿದ ಮಸೂದೆಯು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಜಾರಿಗೊಳಿಸುತ್ತದೆ, ಹೊಗೆ ಮುಕ್ತ ವಾತಾವರಣ ಸೃಷ್ಟಿಸುವ ಬದ್ಧತೆಯನ್ನು ಈ ಮಸೂದೆ ಒತ್ತಿಹೇಳುತ್ತದೆ. ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟುಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದರೆ ಸಾವಿರ ರೂ.ಗಳ ದಂಡ ವಿಧಿಸಬಹುದು.