ಮಂಗಳೂರು(ಮೂಡಿಗೆರೆ): ತಾಲ್ಲೂಕಿನ ಜಾವಳಿ ಸಮೀಪ ತೋಟದ ಮನೆಯೊಂದಕ್ಕೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ಹಣ ಆಭರಣ ದೋಚಿದ್ದ ಪ್ರಕರಣ ಸಂಬಂಧ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ.15 ರಂದು ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಎಂಬುವವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಮನೆಯವರನ್ನು ಹೆದರಿಸಿ, ತಡೆಯಲು ಬಂದ ಶ್ರೀನಿವಾಸಮೂರ್ತಿ ಎಂಬ ಕೆಲಸಗಾರನಿಗೆ ಕತ್ತಿ, ಚಾಕುವಿನಿಂದ ಹಲ್ಲೆ ಮಾಡಿ ಮಾರಣಾಂತಿಕವಾದ ಗಾಯ ಮಾಡಿದ್ದರು. ಮನೆಯಲ್ಲಿದ್ದ ಟಿ.ವಿಯನ್ನು ಒಡೆದು ಹಾಕಿ ಗಾರ್ಡೇಜ್ ಬೀರುವಿನಲ್ಲಿದ್ದ 5,25,000 ಲಕ್ಷ ರೂ. ನಗದು ಮತ್ತು 1,25,000 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರನ್ನು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸಾರ್ ಆಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮುಹಮ್ಮದ್ ಗೌಸ್, ಮೂಡಿಗೆರೆ ತಾಲ್ಲೂಕು ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಆಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್ ಎಂದು ಗುರುತಿಸಲಾಗಿದೆ. ಇವರಲ್ಲಿ ಅನ್ಸಾರ್ ಎಂಬಾತ ದರೋಡೆ ನಡೆಸಿ ಪರಾರಿಯಾಗುವಾಗ ಕತ್ತಲೆಯಲ್ಲಿ ದಾರಿ ತಪ್ಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಬಂಧಿತನಾಗಿದ್ದ. ಉಳಿದವರು ದರೋಡೆ ಮಾಡಿ ಬೇರೆ ಬೇರೆ ದಿಕ್ಕಿಗೆ ತೆರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿಂಗ್ ಕುಮಾರ್ ಎಂಬಾತ ಕಾಫಿ ವ್ಯಾಪಾರಿಯಾಗಿದ್ದು, ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆಯಿಂದ ಕಾಫಿ ಖರೀದಿಸುತ್ತಿದ್ದ ಎಂದು ತಿಳಿದುಬಂದಿದೆ. ಅವನೇ ಈ ಮನೆಯನ್ನು ದರೋಡೆಗೆ ಟಾರ್ಗೆಟ್ ಮಾಡಿ ಉಳಿದವರನ್ನು ಒಟ್ಟು ಸೇರಿಸಿ ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.