ಮಂಗಳೂರು(ನವದೆಹಲಿ): ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಹೊಸ ಕಾನೂನುಗಳು ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಈ ಮೂರು ಮುಸೂದೆಗಳಿಗೆ ಕಳೆದ ವರ್ಷ ಡಿ.21ರಂದು ಸಂಸತ್ತಿನ ಅನುಮೋದನೆ ಸಿಕ್ಕಿತ್ತು. ಬಳಿಕ ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿ.25ರಂದು ಸಹಿ ಹಾಕಿದ್ದರು. ಹೊಸ ಕ್ರಿಮಿನಲ್ ಕಾನೂನು ಮಸೂದೆಗಳ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ಮಸೂದೆಗಳು ದೇಶದ ಜನರನ್ನು ವಸಾಹತು ಕಾಲದ ಮನಃಸ್ಥಿತಿಯಿಂದ ಮುಕ್ತಗೊಳಿಸಲಿವೆ ಎಂದು ಹೇಳಿದ್ದರು.
ಈ ಮೂರು ಮಸೂದೆಗಳು ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬರಲಿವೆ. ‘ಬ್ರಿಟಿಷರ ಕಾಲದಲ್ಲಿ ಈ ಮೂರು ಕಾನೂನುಗಳನ್ನು ರಚಿಸಲಾಯಿತು. ಈ ಕಾನೂನುಗಳನ್ನು ತೆಗೆದುಹಾಕುವವರೆಗೆ ಬ್ರಿಟನ್ನಿನ ಕಾನೂನುಗಳು ದೇಶದಲ್ಲಿ ಮುಂದುವರಿಯುತ್ತವೆ’ ಎಂದು ಶಾ ತಿಳಿಸಿದ್ದರು. ಮೂರು ಮಸೂದೆಗಳು ‘ಸಂತ್ರಸ್ತರನ್ನು ಕೇಂದ್ರೀಕರಿಸಿಕೊಂಡ’, ‘ಸಾಕ್ಷ್ಯ ಆಧಾರಿತ’ ಹಾಗೂ ನ್ಯಾಯ ಪಡೆಯುವುದನ್ನು ಸುಲಲಿತವಾಗಿಸುವ ವ್ಯವಸ್ಥೆಯನ್ನು ಸೃಷ್ಟಿಸಲಿವೆ ಎಂದು ಶಾ ಹೇಳಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು, ಸಂಸದರು, ಶಾಸಕರು, ಐಪಿಎಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಂದ ಒಟ್ಟು 3,200ಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಇವುಗಳನ್ನು ರೂಪಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು.