ಬಿಜೆಪಿಯಿಂದ ಲೋಕಸಭಾ ಟಿಕೆಟ್ ಪಡೆಯುವ ಸಂಪೂರ್ಣ ವಿಶ್ವಾಸ ಇದೆ: ಸತ್ಯಜಿತ್ ಸುರತ್ಕಲ್

ಮಂಗಳೂರು/ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಗುವ ಪೂರ್ಣ ವಿಶ್ವಾಸ ಇದೆ ಎಂದು ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿರುವ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.  ಬಂಟ್ವಾಳದ ತುಂಬೆಯಲ್ಲಿ ಆದಿತ್ಯವಾರ ನಡೆದ ಜನಾಗ್ರಹ ಸಮಾವೇಶದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿಂದೂ ಕಾರ್ಯಕರ್ತರು ನನ್ನ ಪರ ಸಮಾವೇಶವನ್ನು ಏರ್ಪಡಿಸಿ ನನ್ನನ್ನು ಕರೆದಿದ್ದರು. ಸಮಾವೇಶದಲ್ಲಿ ಭಾಗವಹಿಸಿ ನನಗೆ ಪಕ್ಷದಲ್ಲಿ ಸಿಕ್ಕಿರುವ ಸ್ಥಾನಮಾನದ ಬಗ್ಗೆ ಮನದಾಳದ ಮಾತನ್ನು ಹೇಳಿದ್ದೇನೆ. ಕಾರ್ಯಕರ್ತರ ಇಚ್ಛೆಗೆ ವಿರುದ್ಧವಾಗಿ ಯಾವತ್ತೂ ಹೋಗುವುದಿಲ್ಲ. ಟಿಕೆಟ್ ಘೋಷಣೆಯಾಗುವ ತನಕ ಕಾರ್ಯಕರ್ತರೊಂದಿಗೆ ಹೋರಾಟ ನಡೆಸುತ್ತೇನೆ. ನನಗೆ ಟಿಕೆಟ್ ಸಿಗುವ ಪೂರ್ಣ ವಿಶ್ವಾಸ ಇದೆ. ನನ್ನ ತಂಡದ ಎಲ್ಲರಿಗೂ ವಿಶ್ವಾಸ ಇದೆ. ಅಕಸ್ಮಾತ್ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರ ಅಪೇಕ್ಷೆಯಂತೆ ಮುಂದುವರಿಯುವುದಾಗಿ ಹೇಳಿದ್ದಾರೆ. ಪುತ್ತೂರಿನ ಅರುಣ್ ಕುಮಾರ್ ಪುತ್ತಿಲರನ್ನು ನಿಮ್ಮೊಂದಿಗೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪುತ್ತಿಲರ ಬಗ್ಗೆ ಏನೂ ಹೇಳುವುದಿಲ್ಲ. ಕಳೆದ ಚುನಾವಣೆಯಲ್ಲಿ ಅವರು ಏಕಾಂಗಿ ದುಡಿದಿದ್ದರು. ನನ್ನನ್ನು ಕರೆದಿರಲಿಲ್ಲ. ಅವರಿಗೆ ಈಗ ಏನು ಸಮಸ್ಯೆ ಇದೆ ಎನ್ನುವುದು ಗೊತ್ತಿಲ್ಲ. ನಾವು ಅವರನ್ನು ಮಾತನಾಡಿಸಲಿಕ್ಕೆ ಹೋಗಿಲ್ಲ. ಅವರಾಗಿ ನಮ್ಮೊಂದಿಗೆ ಬಂದರೆ ಸ್ವಾಗತಿಸುತ್ತೇವೆ ಎಂದರು.

37 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಹಿಂದುತ್ವಕೋಸ್ಕರ ಕೆಲಸ ಮಾಡಿದ್ದೇನೆ. ನನ್ನಷ್ಟು ಕೆಲಸ ಮಾಡಿದವರು ಯಾರೂ ಇಲ್ಲ ಎಂದು ಅಭಿಮಾನದಿಂದ ಹೇಳುತ್ತಿದ್ದೇನೆ ಎಂದು ಹೇಳಿದರು. ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ವಿರುದ್ಧವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿರುವ ಆರೋಪದ ಬಗ್ಗೆ ಮಾತನಾಡಿದ ಅವರು ಇದರ ಬಗ್ಗೆ ನೂರು ಸಲ ಉತ್ತರ ಕೊಟ್ಟಿದ್ದೇನೆ .ಯಾಕೆ ಅದನ್ನು ಮತ್ತೆ ಮತ್ತೆ ಪೋಸ್ಟ್ ಮಾರ್ಟಮ್ ಮಾಡುತ್ತೀರಿ ಎಂದು ಪ್ರಶ್ನಿಸಿದ ಅವರು, ನಾನು ಕಾಂಗ್ರೆಸ್ ಪರ ಹೋಗಿದ್ದರೆ ನನಗೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಅವಕಾಶ ಇತ್ತು. 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಮಾತನಾಡುವ ಅವಕಾಶ ಇತ್ತು. ಅಂತಹ ಕೆಲಸ ಮಾಡಿಲ್ಲ. ಸಮಾಜಕ್ಕೆ ಅನ್ಯಾಯ ಮಾಡಿದ, ಅಪಮಾನ ಮಾಡಿದ ಮತ್ತು ವೋಟನ್ನು ಪಡೆದು ಸಮಾಜವನ್ನು ಒಡೆದವರ ವಿರುದ್ಧ ಧ್ವನಿ ಎತ್ತಿದ್ದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಭಾರತೀಯ ಜನತಾ ಪಕ್ಷದಿಂದ ಲೋಕಸಭಾ ಚುನಾವಣೆಗೆ ದ.ಕ ಜಿಲ್ಲೆಯಿಂದ ಸ್ಪರ್ಧಿಸಲು ಸತ್ಯಜಿತ್‌ ಸುರತ್ಕಲ್‌ ಅವರಿಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸುವ ಜನಾಗ್ರಹ ಸಮಾವೇಶ ಬಂಟವಾಳದ ಬಂಟರಭವನದಲ್ಲಿ ನಡೆಯಿತು. ಟೀಂ ಸತ್ಯಜಿತ್‌ ಸುರತ್ಕಲ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಮಾಜಿ ಮುಖಂಡ ರವಿರಾಜ್‌ ಬಿಸಿರೋಡ್‌, ಉಡುಪಿ ಜಿಲ್ಲೆ ಮಾಜಿ ಅಧ್ಯಕ್ಷ ಅಚ್ಚುತ್ ಅಮಿನ್ ಕಲ್ಮಾಡಿ, ಸುಬ್ರಹ್ಮಣ್ಯ ಕಲ್ಮಾಡಿ ಶಿವಮೊಗ್ಗ, ಕೆ.ಪಿ ಮಂಜುನಾಥ್, ಟಿ.ಪಿ ಗಾಂಧಿ ಕೊಡಗು, ಆನಂದ ನಾಯಕ್ ಉತ್ತರ ಕನ್ನಡ, ಸಂದೀಪ್ ಅಂಬ್ಲಮೊಗರು, ಸಂದಿಪ್ ಪಂಪ್ವೆಲ್, ಆದರ್ಶ್ ಶಿವಮೊಗ್ಗ, ಪಿಪಿ ರಾಜು ಮತ್ತಿತರರು ಭಾಗವಹಿಸಿದ್ದರು.

 

LEAVE A REPLY

Please enter your comment!
Please enter your name here