ಸಹ್ಯಾದ್ರಿ ಮೈದಾನದಲ್ಲಿ ಮಾರ್ಚ್‌ 2ರಂದು ‘ಹೊಂಬೆಳಕು’-ದ.ಕ ಮತ್ತು ಉಡುಪಿ ಜಿಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಮತ್ತು ಸಿಬ್ಬಂದಿಗೆ ಅಡ್ಯಾರ್‌ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ‘ಹೊಂಬೆಳಕು’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಮಾರ್ಚ್ 2 ರಂದು ಗ್ರಾಮ ಸ್ವರಾಜ್ ಟ್ರಸ್ಟ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್‌ನ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ‘ಪಂಚಾಯತ್‌ ರಾಜ್ ಹಾಗೂ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಸದಾ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರ ಒತ್ತಡ ನಿರ್ಮೂಲನೆ ಸಲುವಾಗಿ ಈ ಕೂಟವನ್ನು ಆಯೋಜಿಸಲಾಗಿದೆ. ಪಂಚಾಯತ್‌ ರಾಜ್‌ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಪರಸ್ಪರ ಬೆರೆಯುವ ಅವಕಾಶ ಕಡಿಮೆ. ಅವರ ಸಂಗಮಕ್ಕೆ ಅವಕಾಶ ಕಲ್ಪಿಸುವ ಈ ಸ್ಪರ್ಧಾ ಕೂಟವೂ ಪರಸ್ಪರ ಸೌಹಾರ್ದ ಬೆಳೆಸಲು ನೆರವಾಗಲಿದೆ’ ಎಂದರು.

‘ಮಾರ್ಚ್ 2ರಂದು ಬೆಳಿಗ್ಗೆ ಆಕರ್ಷಕ ಪಥ ಸಂಚಲನ ನಡೆಯಲಿದೆ. ಅತ್ಯುತ್ತಮ ನಿರ್ವಹಣೆ ತೋರುವ ತಂಡಗಳಿಗೆ ಮೊದಲ ಬಹುಮಾನವಾಗಿ ₹ 50 ಸಾವಿರ, ಎರಡನೇ ಬಹುಮಾನವಾಗಿ ₹ 25 ಸಾವಿರ ಹಾಗೂ ಮೂರನೇ ಬಹುಮಾನವಾಗಿ ₹ 10 ಸಾವಿರ ವಿತರಿಸಲಾಗುವುದು. ಗುಂಪು ಹಾಗೂ ವೈಯುಕ್ತಿಕ ವಿಭಾಗಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ. ಸುಮಾರು 5 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಹಾಗೂ ಪ್ರತ್ಯೇಕವಾಗಿ ಭಾಗವಹಿಸುವ ಸ್ಪರ್ಧೆಗಳೂ ಇರಲಿವೆ. ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿವೆ’ ಎಂದು ವಿವರಿಸಿದರು. ‘ಉಭಯ ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆ ಪ್ರತಿನಿಧಿಗಳು ಈ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಿ ಸರಕಾರ ಸುತ್ತೋಲೆ ಹೊರಡಿಸಿದೆ. ಈ ಕೂಟದಲ್ಲಿ ಭಾಗವಹಿಸುವವರು ತಮ್ಮ ಸಂಸ್ಥೆಗಳಿಂದ ಪ್ರಯಾಣ ಭತ್ಯೆ ಪಡೆಯಲು ಅವಕಾಶವಿದೆ. ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆ, ಟಿ–ಶರ್ಟ್ ಹಾಗೂ ಕ್ಯಾಪ್‌ ನೀಡಲಾಗುವುದು. ಪ್ರತಿ ಸ್ಪರ್ಧೆಯ ವಿಜೇತರಿಗೂ ನಗದು ಬಹುಮಾನವಿದೆ’ ಎಂದರು.

ನೋಂದಣಿ ಕಡ್ಡಾಯ: ‘ಆನ್ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಸ್ಪರ್ಧಿಗಳು ಇದೇ 28ರ ಒಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ’ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್‌ ಕಟೀಲ್‌ ಹಾಗೂ ಉಭಯ ಜಿಲ್ಲೆಗಳ ಶಾಸಕರು ಈ ಕೂಟದಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಗೌರವ ಸಲಹೆಗಾರರಾದ ಹರೀಶ್ ಕುಮಾರ್ ಕೆ., ಗ್ರಾಮ ಸ್ವರಾಜ್ ಟ್ರಸ್ಟ್ ಅಧ್ಯಕ್ಷ ಕೆ.ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಲಾರೆನ್ಸ್ ಡಿಸೋಜ, ಖಜಾಂಚಿ ಪ್ರವೀಣ್‌ಚಂದ್ರ ಆಳ್ವ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here