ಮಂಗಳೂರು(ಬೆಂಗಳೂರು): ನಕಲಿ ಮ್ಯಾಟ್ರಿಮೋನಿಯಲ್ ಖಾತೆ ಬಳಸಿ ಸುಮಾರು 259 ಮಹಿಳೆಯರಿಗೆ ವಂಚಿಸಿದ ವ್ಯಕ್ತಿಯನ್ನು ಬೆಂಗಳೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ನರೇಶ್ ಪೂಜಾರಿ ಗೋಸ್ವಾಮಿ(45) ಎಂದು ಗುರುತಿಸಲಾಗಿದೆ. ಆರೋಪಿಯು ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಪ್ರಸ್ತುತ ರಾಜಾಜಿನಗರದಲ್ಲಿ ವಾಸಮಾಡುತ್ತಿದ್ದಾನೆ. ಈತ ಮ್ಯಾಟ್ರಿಮೋನಿಯಲ್ ಸೈಟ್ ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಗಳನ್ನು ಸೃಷ್ಟಿಸಿ ಮಹಿಳೆಯರು ಹಾಗೂ ಅವರ ಪೋಷಕರಿಗೆ ಹಣ ನೀಡುವಂತೆ ಆಮಿಷವೊಡ್ಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈತನ ವಿರುದ್ಧ ಕೊಯಮತ್ತೂರಿನ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಆರಂಭಿಸಿದ ರೈಲ್ವೇ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈತ ವಿಧವೆಯರನ್ನು, ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ತಡರಾತ್ರಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಮಹಿಳೆಯರ ವಿಶ್ವಾಸ ಗಳಿಸಿ ಹಣ ನೀಡುವಂತೆ ಆಮಿಷ ಒಡ್ಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.