ಮಂಗಳೂರು(ನವದೆಹಲಿ): ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿದೆ.
ಗುರುವಾರ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಶೀಘ್ರದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್, ಅನುರಾಗ್ ಠಾಕೂರ್, ಸ್ಮೃತಿ ಇರಾನಿ ಸೇರಿದಂತೆ ಕೇಂದ್ರದ ಪ್ರಮುಖ ನಾಯಕರ ಹೆಸರು ಮೊದಲ ಪಟ್ಟಿಯಲ್ಲಿ ಇರುವುದು ಖಚಿತ ಎನ್ನಲಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರನೌತ್ ಹಾಗೂ ಕೇಂದ್ರದ ಮಾಜಿ ಸಚಿವೆ, ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರ ಹೆಸರು ಮುನ್ನೆಲೆಗೆ ಬಂದಿವೆ. ಅದರೆ, ಸೆಲೆಬ್ರಿಟಿಗಳಿಗೆ ಟಿಕೆಟ್ ನೀಡುವ ಕುರಿತು ಈವರೆಗೆ ಬಿಜೆಪಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಬಿಜೆಪಿ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಜೆ.ಪಿ. ನಡ್ಡಾ ಅವರು ಈಗಾಗಲೇ ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಉತ್ತರಾಖಂಡದ ಪ್ರಮುಖ ನಾಯಕರು ಮತ್ತು ಪದಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು (ಮಾ.1) ಕೂಡ ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರೊಂದಿಗೆ ಮೂರು ಸಭೆಗಳನ್ನು ಬಿಜೆಪಿ ನಿಗದಿಪಡಿಸಿದೆ. ನಾಳೆ (ಮಾ.2) ನಡ್ಡಾ ಅವರು ಎಲ್ಲಾ ರಾಜ್ಯಗಳ ಚುನಾವಣಾ ಉಸ್ತುವಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.