ಮಂಗಳೂರು(ಬೆಂಗಳೂರು): ಬ್ರೂಕ್ಫೀಲ್ಡ್ನಲ್ಲಿರುವ ದಿ ರಾಮೇಶ್ವರಂ ಕೆಫೆ ಹೋಟೆಲ್ನಲ್ಲಿ ಬಾಂಬ್ ಇರಿಸಿ ಪರಾರಿಯಾಗಿರುವ ಶಂಕಿತನ ಪತ್ತೆಗಾಗಿ ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿದ್ದು, ನಗರ ಹಾಗೂ ಹೊರ ರಾಜ್ಯಗಳಲ್ಲಿ ಹುಡುಕಾಟ ಆರಂಭವಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆಯ ಮುಖ, ಕಾಲು, ಕೈ ಹಾಗೂ ಇತರೆ ಭಾಗಕ್ಕೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಹೋಟೆಲ್ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಶಂಕಿತನ ಹಾವ–ಭಾವ ಸೆರೆಯಾಗಿದೆ. ಹೋಟೆಲ್ ಅಕ್ಕ–ಪಕ್ಕದಲ್ಲಿರುವ ಕ್ಯಾಮೆರಾದಲ್ಲಿ ಮುಖ ಚಹರೆಯ ಸುಳಿವು ಲಭ್ಯವಾಗಿದೆ. ವಿಡಿಯೊ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಬ್ರೂಕ್ಫೀಲ್ಡ್ಗೆ ಬಸ್ಸಿನಲ್ಲಿ ಬಂದಿದ್ದ ಆರೋಪಿ, ಬ್ಯಾಗ್ ಹಿಡಿದುಕೊಂಡು ನೇರವಾಗಿ ರಾಮೇಶ್ವರಂ ಕೆಫೆಗೆ ಹೋಗಿದ್ದ. ಇಡ್ಲಿ ಪಡೆದಿದ್ದ. ಕೈ ಹಾಗೂ ತಟ್ಟೆಗಳನ್ನು ತೊಳೆಯಲು ಪ್ರತ್ಯೇಕ ಜಾಗವಿದೆ. ಇದರ ಪಕ್ಕವೇ ಕಟ್ಟೆ ಇದ್ದು, ಅದೇ ಜಾಗದಲ್ಲಿ ಶಂಕಿತ ಕುಳಿತುಕೊಂಡಿದ್ದ. ಕಟ್ಟೆಗೆ ಪಕ್ಕ ಮರವಿದ್ದು, ಅಲ್ಲೇ ಬ್ಯಾಗ್ ಇರಿಸಿದ್ದ. ನಂತರ, ಇಡ್ಲಿ ತಿಂದು ಸ್ಥಳದಿಂದ ಹೊರಟು ಹೋಗಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ.‘ಆರೋಪಿ ಹೋದ ಗಂಟೆ ನಂತರ ಮಧ್ಯಾಹ್ನ 12.55ಕ್ಕೆ ಬಾಂಬ್ ಸ್ಫೋಟಗೊಂಡಿದೆ. ಶಂಕಿತ, ಮೊದಲೇ ಟೈಮರ್ ನಿಗದಿ ಮಾಡಿ ಕೆಫೆಗೆ ಬಂದು ಬಾಂಬ್ ಇರಿಸಿ ಹೋಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಹಾಗೂ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಭೇಟಿ ನೀಡಿದ್ದಾರೆ. ತನಿಖೆ ಮುಂದುವರಿದಿದೆ.