ಎಂ ಆರ್ ಪಿ ಎಲ್ ನಿಂದ ಫಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯ-ಸಾಕ್ಷ್ಯ ಸಮೇತ ಹರಿವಿನ ಮೂಲ ಪತ್ತೆ ಹಚ್ಚಿದ ಹೋರಾಟ ಸಮಿತಿ

ಮಂಗಳೂರು: ತುಳುನಾಡಿನ ಜೀವನದಿಗಳಲ್ಲಿ ಒಂದಾದ ಪಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ನೇರವಾಗಿ ತೋಕೂರು ಹಳ್ಳದ ಮೂಲಕ ಹರಿಯ ಬಿಡುವ ಘಾತುಕ ಕೃತ್ಯ ಎಗ್ಗಿಲ್ಲದೆ ಮುಂದುವರಿದಿದೆ. ಬೈಕಂಪಾಡಿ, ಪಣಂಬೂರು ವ್ಯಾಪ್ತಿಯ ಬಹುತೇಕ ಕಿರು, ಮಧ್ಯಮ ಕೈಗಾರಿಕೆಗಳು ಪಲ್ಗುಣಿಗೆ ವಿಷವುಣಿಸುವ ನಿಯಮ ಬಾಹಿರ ಕಾರ್ಯದಲ್ಲಿ ಭಾಗಿಯಾಗಿದ್ದರೂ, ದೇಶದ ಪ್ರತಿಷ್ಟಿತ ತೈಲ ಕಂಪೆನಿ ಎಂದು ಹೆಸರಾದ ಸಾರ್ವಜನಿಕ ರಂಗದ ಎಂ ಆರ್ ಪಿ ಎಲ್ ಕೃತ್ಯದಲ್ಲಿ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಬಹಿರಂಗಗೊಂಡಿದೆ.

ಡಿವೈಎಫ್ಐ, ಹೋರಾಟ ಸಮಿತಿಯ ಸತತ ಹೋರಾಟ, ಮಾಧ್ಯಮಗಳಲ್ಲಿ ಆದ ಸುದ್ದಿಗಳಿಂದ ವರ್ಷದ ಹಿಂದೆ ಸುಪ್ರೀಂಕೋರ್ಟ್ ನ ಹಸಿರು ಪೀಠ ಸುಮಟೊ ಮೊಕದ್ದಮೆ ದಾಖಲಿಸಿ ಜಿಲ್ಲಾಡಳಿತಕ್ಕೆ ನೋಟೀಸು ನೀಡಿತ್ತು. ತನ್ನ ತಂಡವನ್ನೂ ಪರಿಶೀಲನೆಗೆ ಕಳುಹಿಸಿತ್ತು. ಬಿ ಎಮ್ ಫಾರೂಕ್ ಅಧ್ಯಕ್ಷತೆಯ ವಿಧಾನ ಪರಿಷತ್ ನ ಭರವಸೆ ಸಮಿತಿಯೂ ಎರಡೆರಡು ಭಾರಿ ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಕೈಗಾರಿಕೆಗಳ ಇಂತಹ ಗಂಭೀರ ಅಪರಾಧ ಕೃತ್ಯಗಳ ವಿರುದ್ದ ಎಚ್ಚೆತ್ತ ಜಿಲ್ಲಾಡಳಿತ ಸರಣಿ ಪರಿಶೀಲನೆ, ನಡೆಸಿ ಹಸಿರು ಪೀಠಕ್ಕೆ ಈ ಕುರಿತು ವರದಿ ಸಲ್ಲಿಸಿತ್ತು. ಆದರೆ ದಿನ ಕಳೆದಂತೆ ಮತ್ತೆ ಯಥಾ ಪ್ರಕಾರ ಬೈಕಂಪಾಡಿ ಕೈಗಾರಿಕಾ ವಲಯದ ಪಾಮ್ ಆಯಿಲ್, ಫಿಷ್ ಮಿಲ್, ಬಿಯರ್ ಕಂಪೆನಿಗಳ ಕಡೆಯಿಂದ ಮಾರಕ ತ್ಯಾಜ್ಯ ಪಲ್ಗುಣಿಗೆ ತೋಕೂರು ಹಳ್ಳದ ಮೂಲಕ ಹರಿದು ಬರುವುದು ಮುಂದುವರಿದಿತ್ತು. ಇದರಲ್ಲಿ ಪತಂಜಲಿ ಫುಡ್ಸ್ ನ ರುಚಿಸೋಯಾ ಕಂಪೆನಿ ರೆಡ್ ಹ್ಯಾಂಡಾಗಿ ಡಿವೈಎಫ್ಐ, ಹೋರಾಟ ಸಮಿತಿಯ ಕೈಗೆ ಸಿಕ್ಕಿಬಿದ್ದಿತ್ತು. ಪತಂಜಲಿ ಫುಡ್ಸ್ ನ್ನು ಈ ಅಪರಾಧಕ್ಕಾಗಿ ಮುಚ್ಚಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಘಟಕ ಶಿಫಾರಸ್ಸು ಮಾಡಿದ್ದರೂ ಕಂಪೆನಿಯ ಮೇಲೆ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ.

ಈಗ ಕಳೆದ ಎರಡು ವಾರಗಳಿಂದ ತೋಕೋರು ಹಳ್ಳದ ಸ್ಥಿತಿ ಪೂರ್ತಿ ಹದಗೆಟ್ಟಿದ್ದು, ಪಲ್ಗುಣಿಯನ್ನು ಸೇರುವ ಸ್ಥಳದಿಂದ ಕನಿಷ್ಟ ಐದಾರು ಕಿ ಮೀ ಉದ್ದಕ್ಕೂ ತೋಕೂರು ಹಳ್ಳ ಕೊಳೆತು ನಾರುತ್ತಿದೆ. ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಪೆಟ್ರೋ ಕೆಮಿಕಲ್ ದುರ್ವಾಸನೆ ದೂರದಿಂದಲೇ ಮೂಗಿಗೆ ಬಡಿಯುತ್ತಿದೆ. ಈ ಕುರಿತು ಹೋರಾಟ ಸಮಿತಿಯ ಪ್ರಮುಖರು ಸತತವಾಗಿ ತೋಕೂರು ಹಳ್ಳದ ಮೇಲೆ ನಿಗಾ ಇರಿಸಿ ಕೈಗಾರಿಕ ತ್ಯಾಜ್ಯ ಹರಿದು ಬರುವ ಮೂಲದ ಪತ್ತೆಗೆ ಯತ್ನಿಸುತ್ತಿತ್ತು. ಜಿಲ್ಲಾಡಳಿತ, ಮಾಧ್ಯಮದ ಗಮನಕ್ಕೂ ಈ ವಿಷಯ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹೋರಾಟ ಸಮಿತಿ ವಿಷಾದ ವ್ಯಕ್ತಪಡಿಸಿದೆ. ಹೋರಾಟ ಸಮಿತಿಯ ಪ್ರಮುಖರು ಮತ್ತೆ ಹುಡುಕಾಟ ನಡೆಸಿದಾಗ ಎಂ ಆರ್ ಪಿ ಎಲ್ ನ ಮೂರನೆ ಹಂತದ ಕೋಕ್ ಸಲ್ಫರ್ ಘಟಕದ ದಿಕ್ಕಿನಿಂದ ತೋಕೂರು ಹಳ್ಳಕ್ಕೆ ಪೆಟ್ರೋ ಕೆಮಿಕಲ್ ವಾಸನೆಯುಳ್ಳ ಮಾರಕ ಕೈಗಾರಿಕ ತ್ಯಾಜ್ಯ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಬರುವುದು ಪತ್ತೆ ಯಾಗಿದೆ. ವಿಶೇಷ ವಾಣಿಜ್ಯ ವಲಯ ಕಡೆಯಿಂದ ಸುರತ್ಕಲ್ ಕಡೆಗೆ ಸಾಗುವ ಕಾರಿಡಾರ್ ರಸ್ತೆಯಲ್ಲಿ ಸಿಗುವ ಈಗ ದೊಡ್ಡ ಕೆರೆಯಂತೆ ಕಾಣುವ ತೋಕೋರು ಹಳ್ಳದ ನೀರು ವಿಶಾಲವಾಗಿ ಹರಿದು ನಿಲ್ಲುವ ಜಾಗದಲ್ಲಿ ಕಂಪೆನಿ ಕಡೆಯಿಂದ ಈ ದುರ್ವಾಸನೆಯಿಂದ ಕೂಡಿದ ಕೈಗಾರಿಕಾ ತ್ಯಾಜ್ಯ ನೀರು ಹರಿದು ಬಂದು ಫಲ್ಗುಣಿ ನದಿಗೆ ಸೇರುವುದು ಬರಿಗಣ್ಣಿಗೇ ಕಾಣುತ್ತಿದೆ.

ಈ ಕುರಿತು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಥಳ ಪರಿಶೀನೆ ನಡೆಸುವುದಾಗಲಿ, ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡುವುದಾಗಲಿ ಮಾಡದಿರುವುದು ಅವರಿಗೆ ಜಿಲ್ಲೆಯ ಪರಿಸರ,ಜನರ ಆರೋಗ್ಯ, ಹಸಿರು ಪೀಠದ ಆದೇಶಗಳ ಕುರಿತು ಕನಿಷ್ಟ ಕಾಳಜಿಯೂ ಇಲ್ಲದಿರುವುದನ್ನು ಎತ್ತಿತೋರಿಸುತ್ತದೆ ಎಂದು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಜೋಕಟ್ಟೆ, ತೋಕೂರು, ಕಳವಾರು ಭಾಗದಲ್ಲಿ ಎಂ ಆರ್ ಪಿ ಎಲ್ ನ ಅಸಹನೀಯ ಶಬ್ದ, ವಾಯು ಮಾಲಿನ್ಯಗಳ ಕುರಿತು ಗ್ರಾಮಸ್ಥರು ಸತತವಾಗಿ ದೂರುತ್ತಿದ್ದರೂ, ಜಿಲ್ಲಾಧಿಕಾರಿಗಳು ಯಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಜೋಕಟ್ಟೆ, ಕೆಂಜಾರು, ಕಳವಾರು ಭಾಗದಲ್ಲಿ 27 ಎಕರೆ ಜಾಗದಲ್ಲಿ ಹಸಿರು ವಲಯ ನಿರ್ಮಾಣದ ಸರಕಾರಿ ಆದೇಶವನ್ನು ಎಂ ಆರ್ ಪಿ ಎಲ್ ಜಾರಿಗೊಳಿಸದಿರುವ ದೂರಿನ ಕುರಿತೂ ಜಿಲ್ಲಾಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ನದಿ, ಪರಿಸರಗಳ ನಾಶ, ಕಂಪೆನಿಗಳ ಮಾಲಿನ್ಯದ ಕುರಿತು ಸ್ಥಳೀಯ ಸಂಸದ, ಶಾಸಕರ ನಿರ್ಲಿಪ್ತ ದೋರಣೆ, ಕಂಪೆನಿ ಪರವಾದ ನೀತಿಯನ್ನೇ ಜಿಲ್ಲಧಿಕಾರಿಗಳೂ ಅಳವಡಿಸಿಕೊಂಡಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿರುವ ಹೋರಾಟ ಸಮಿತಿ ಈಗಲೂ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಕಂಪೆನಿಯ ಮಾಲಿನ್ಯದ ಜೊತೆಗೆ ಜಿಲ್ಲಾಧಿಕಾರಿಗಳ ಮೌನದ ವಿರುದ್ದವೂ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದೆ. ಕೈಗಾರಿಕಾ ತ್ಯಾಜ್ಯ ನೀರಿನ ಮೂಲ ಪತ್ತೆ ಹಚ್ಚುವ ತಂಡದಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಮಿತಿಯ ಪ್ರಮುಖ, ಜೋಕಟ್ಟೆ ಗ್ರಾಮ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವಾ, ಡಿವೈಎಫ್ಐ ಮುಖಂಡ ಶ್ರೀನಾಥ್ ಕುಲಾಲ್, ಇಕ್ಬಾಲ್ ಜೋಕಟ್ಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here