ಮಂಗಳೂರು(ಬೆಳಗಾವಿ): ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಪ್ರಕರಣದಲ್ಲಿ ರಾಜ್ಯಸಭೆ ಸದಸ್ಯರಾದ ನಾಸೀರ್ ಹುಸೇನ್ ಅವರನ್ನು ನಾಲ್ಕನೇ ಆರೋಪಿ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ತನಿಖೆ ಪೂರ್ಣಗೊಳ್ಳುವವರೆಗೆ ನಾಸೀರ್ ಹುಸೇನ್ ಅವರು ಪ್ರಮಾಣವಚನ ಸ್ವೀಕರಿಸಬಾರದು. ಅವರಿಗೆ ಪ್ರಮಾಣ ವಚನಕ್ಕೂ ಅವಕಾಶ ನೀಡಬಾರದು ಎಂದು ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು(ಮಾ.5) ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ದೇಶದ್ರೋಹ ಪ್ರಕರಣದಲ್ಲಿ ಸೂತ್ರಧಾರಿಗಳು ಯಾರು? ಪಾತ್ರಧಾರಿಗಳು ಯಾರು? ಎಂದು ಹೇಳಬೇಕು. ಸೂತ್ರಧಾರ ನಾಸೀರ್ ಹುಸೇನ್ ಅವರ ಹೆಸರನ್ನೇ ಎಫ್ಐಆರ್‌ನಲ್ಲಿ ಕೈ ಬಿಟ್ಟಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಇದುವರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಹಿರಂಗ ಮಾಡಿಲ್ಲ. ರಾಜ್ಯದ ಜನರಿಗೆ ಹೇಳಬಾರದಂಥ ಸಂಗತಿ ಅದರಲ್ಲಿ ಏನಿದೆ? ಎಂದು ಹೇಳಿದ ವಿಜಯೇಂದ್ರ ಪೊಲೀಸರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ ಎಂದು ಕಿಡಿ ಕಾರಿದರು.