‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಆರೋಪ – 14ತಿಂಗಳ ಬಳಿಕ ಬಿಜೆಪಿ ಕಾರ್ಯಕರ್ತನ ಬಂಧನ

ಮಂಗಳೂರು/ಮಂಡ್ಯ:  2022ರ ಡಿ.18ರಂದು ನಡೆದಿದ್ದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆ ಕೂಗಿರುವ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತ ರವಿ ಅಲಿಯಾಸ್ ಬುಲೆಟ್ ರವಿ ಎಂಬಾತನನ್ನು ಮಂಡ್ಯ ಪಶ್ಚಿಮ ಠಾಣೆಯ ಪೋಲಿಸರು ಮಾ.4ರ ತಡರಾತ್ರಿ ಬಂಧಿಸಿದ್ದಾರೆ.

ಇಂದು (ಮಾ.5) ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಝಿಂದಾಬಾದ್ ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದರು ಎನ್ನಲಾಗಿದೆ. ಈ ವೇಳೆ ಅರವಿಂದ ಎಂಬ ಕಾರ್ಯಕರ್ತ ರವಿ ಬಾಯಿ ಮುಚ್ಚಿಸಿದ್ದರು.

14 ತಿಂಗಳ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕನ್ನಂಬಾಡಿ ಕುಮಾರ್ ಎಂಬವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಬಿಜೆಪಿ ಕಾರ್ಯಕರ್ತರಾದ ರವಿ, ಶಿವಕುಮಾರ್ ಆರಾಧ್ಯ ಎಂಬವರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು, ಸದ್ಯ ಬಿಜೆಪಿ ಕಾರ್ಯಕರ್ತ ರವಿಯನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here