ಮಂಗಳೂರು: ಗಡಿಯ ಬೇರೆ ಬೇರೆ ಭಾಗದಿಂದ ಕಳ್ಳಮಾರ್ಗದ ಮೂಲಕ ಯಥೇಚ್ಛವಾಗಿ ಅಡಿಕೆ ಬರುತ್ತಿದೆ. ಇದನ್ನು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾದ ಪರಿಣಾಮ ಅಡಿಕೆ ಬೆಲೆ ಕುಸಿದು ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರೈತ ಒಕ್ಕೂಟ ಅಡಿಕೆ ಆಮದು ನಿಷೇಧಿಸುವಂತೆ ಹಾಗೂ ಇತರ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮಾ.7 ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಪೂರ್ವಭಾವಿಯಾಗಿ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಟ್ರ್ಯಾಕ್ಟರ್ ಹಾಗೂ ವಾಹನ ಜಾಥಾ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲಿದ್ದೇವೆ ಎಂದು ರೈತ ಒಕ್ಕೂಟದ ಮುಖಂಡ ಓಸ್ವಾಲ್ಡ್ ಫರ್ನಾಂಡೀಸ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತೀಕರಣದಿಂದ ವಿಶ್ವವಾಣಿಜ್ಯ ವ್ಯಾಪಾರ ಸಂಸ್ಥೆಯೊಂದಿಗಿನ ಒಪ್ಪಂದ, ರೈತ ವಿರೋಧಿ ನೀತಿಗಳಿಂದಾಗಿ ರೈತರು ಸಾಲಗಾರರಾಗಿ ಮೂರುವರೆ ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ದ.ಕ.ಜಿಲ್ಲೆಯ ರೈತರು ಅಡಿಕೆ ಮತ್ತು ತೆಂಗು ಬೆಳೆಯನ್ನು ನಂಬಿ ಬದುಕುತ್ತಿದ್ದು, ಅರ್ಥಿಕ ಪರಿಸ್ಥಿತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಎಳೆ ಚುಕ್ಕಿ ರೋಗ, ಹಳದಿ ಎಲೆ ರೋಗ ಹಾಗೂ ತೆಂಗಿನ ಬೆಲೆ ಕುಸಿತದಿಂದ ಜಿಲ್ಲೆಯ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಯೋಜಕ ಸನ್ನಿ ಡಿಸೋಜ ಅವರು ಮಾತನಾಡಿ, ಬಂಟ್ವಾಳದ ಮೂಲಕ ಹಾದುಹೋಗುವ 400 ಕೆ.ವಿ.ವಿದ್ಯುತ್ ಮಾರ್ಗವನ್ನು ಸ್ಥಳಾಂತರ ಮಾಡಬೇಕು, ರೈತರ ಭೂಮಿಯನ್ನು ಅತಿಕ್ರಮಣ ಮಾಡುವ ಬದಲು ಭೂಮಿಯ ಅಡಿಯಲ್ಲಿ ವಿದ್ಯುತ್ ಪೂರೈಕೆ ಮಾಡುವ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲಿ ಎಂದು ತಿಳಿಸಿದರು.